×
Ad

ರೈತರ ಖಾತೆಗಳಿಗೆ 1 ರೂ.ಜಮೆ ಮಾಡಿದ್ದು ಸತ್ಯ: ಎ.ಮಂಜು

Update: 2017-06-09 20:25 IST

ಬೆಂಗಳೂರು, ಜೂ.9: ಬೆಳೆ ನಷ್ಟ ಪರಿಹಾರವು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲುಪುತ್ತಿದೆಯೆ ಇಲ್ಲವೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಆಧಾರ್ ಸಂಖ್ಯೆ ಹೊಂದಾಣಿಕೆಯಾಗಿರುವ ಖಾತೆಗಳಿಗೆ ಪರೀಕ್ಷಾರ್ಥವಾಗಿ 1 ರೂ.ಗಳನ್ನು ಜಮೆ ಮಾಡಿ ಪರಿಶೀಲನೆ ನಡೆಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಎ.ಮಂಜು ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಖಾತೆಗಳಿಗೆ ಈಗ ಜಮೆ ಮಾಡಿರುವುದು ಬೆಳೆ ನಷ್ಟ ಪರಿಹಾರದ ಹಣವಲ್ಲ. ಪರಿಶೀಲನೆಗಾಗಿ 1 ರೂ.ಗಳನ್ನು ಜಮೆ ಮಾಡಲಾಗಿದೆ ಎಂದರು.

ಹಾಸನ ಸೇರಿದಂತೆ ಇತರ ಜಿಲ್ಲೆಗಳ ರೈತರ ಖಾತೆಗಳಿಗೆ ವಿಮಾ ಕಂಪೆನಿಯ ಪರವಾಗಿ ತಲಾ ಒಂದು ರೂ.ಗಳನ್ನು ಜಮೆ ಮಾಡಿರುವುದು ನನ್ನ ಗಮನಕ್ಕೂ ಬಂದಿದೆ. ಸದನದಲ್ಲೂ ಈ ವಿಚಾರ ಇಂದು ಚರ್ಚೆಯಾಗಿದೆ ಎಂದು ಎ.ಮಂಜು ಹೇಳಿದರು.

ಆಧಾರ್ ಸಂಖ್ಯೆ ಹೊಂದಾಣಿಕೆಯಾಗಿರುವ ರೈತರ ಖಾತೆಗಳಿಗೆ ಹಣ ಜಮೆಯಾಗುತ್ತಿದ್ದೆಯೆ, ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಅನುಸರಿಸಲಾಗಿದೆ. ಸುಮಾರು ಒಂದು ಲಕ್ಷ ರೈತರ ಖಾತೆಗಳಿಗೆ ಈ ರೀತಿ ಹಣ ಜಮೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ರೈತರ ಖಾತೆಗಳಿಗೆ ಹಣ ಜಮೆ ಮಾಡುವುದು ನಮ್ಮ ಕೆಲಸವಲ್ಲ. ನ್ಯಾಷನಲ್ ಪೇಮೆಂಟ್ ಆಫ್ ಇಂಡಿಯಾ ವತಿಯಿಂದ ಈ ಕೆಲಸ ನಡೆಯುತ್ತದೆ. ರಾಜ್ಯದಲ್ಲಿ ಎಷ್ಟು ಖಾತೆದಾರರಿದ್ದಾರೆ, ಎಷ್ಟು ಬೆಳೆ ನಷ್ಟವಾಗಿದೆ ಎಂಬ ಮಾಹಿತಿಯನ್ನು ಸಂಗ್ರಹಿಸುವುದಷ್ಟೇ ನಮ್ಮ ಕೆಲಸ. ಈ ವಿಚಾರದಲ್ಲಿ ಸರಕಾರದಿಂದ ಯಾವುದೆ ಲೋಪವಾಗಿಲ್ಲ ಎಂದು ಎ.ಮಂಜು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News