ಸರಕಾರಿ ಶಾಲೆಗಳಲಿ ಕಲಿತವರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ: ಕೆ.ಎಸ್.ಪುಟ್ಟಣ್ಣಯ್ಯ
ಬೆಂಗಳೂರು, ಜೂ. 9: ಸರಕಾರಿ ಶಾಲೆಗಳು ಅನಾಥ ಮಕ್ಕಳ ಕಲಿಕೆಗೆ ಸೀಮಿತವಾಗಿವೆ. ಹೀಗಾಗಿ ಸರಕಾರಿ ಶಾಲೆಗಳಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ಕೆ.ಎಸ್.ಪುಟ್ಟಣ್ಣಯ್ಯ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ವಿವಿಧ ಇಲಾಖೆ ಬೇಡಿಕೆಗಳ ಮೇಲೆ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಪುಟ್ಟಣ್ಣಯ್ಯ, ಖಾಸಗಿ ಶಾಲೆಗಳಿಗೆ ಮಕ್ಕಳು ಹೋಗುವುದನ್ನು ತಪ್ಪಿಸುವ ದೃಷ್ಟಿಯಿಂದ ಕೇವಲ ಚರ್ಚೆ ಮಾಡಿದರೆ ಪ್ರಯೋಜನ ಆಗುವುದಿಲ್ಲ.ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಮೂಲಕ ಶಾಲೆಗಳ ಪುನಶ್ಚೇತನಕ್ಕೆ ಪರ್ಯಾಯ ಆಲೋಚನೆ ಮಾಡಬೇಕು. ಅದು ಬಿಟ್ಟು ಸುಖಾಸುಮ್ಮನೆ ಸದನದಲ್ಲಿ ತೌಡು ಕುಟ್ಟುವುದರಿಂದ ಜನರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಗಮನ ಸೆಳೆದರು.
ಶಿಕ್ಷಣ ಕ್ಷೇತ್ರವನ್ನು ಅನುತ್ಪಾದಕ ಕ್ಷೇತ್ರ ಎಂದು ಪರಿಗಣಿಸಬಾರದು. ಭವಿಷ್ಯದ ದೃಷ್ಟಿಯಿಂದ ಮಾನವ ಸಂಪನ್ಮೂಲ ಸೃಷ್ಟಿಸಬೇಕು ಎಂದ ಅವರು, ಶಿಕ್ಷಣ ಮಾಧ್ಯಮ ವಿಚಾರದಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಸರಿಯಲ್ಲ ಎಂದು ಆಕ್ಷೇಪಿಸಿದರು