ಆಚರಣೆಗಳು ಕೇವಲ ತೋರಿಕೆಗಾಗಿಯೇ?

Update: 2017-06-09 18:48 GMT

ಮಾನ್ಯರೆ, ಜಾಗೃತಿಗಾಗಿ ಪ್ರಪಂಚದಾದ್ಯಂತ ಎಷ್ಟು ದಿನಗಳನ್ನು ಆಚರಿಸುತ್ತಾರೋ ಅವೆಲ್ಲವನ್ನೂ ನಾವೂ ಚಾಚೂ ತಪ್ಪದೆ ವರ್ಷಂಪ್ರತಿ ರಾಜ್ಯಾದ್ಯಂತ ಆಚರಿಸುತ್ತಿದ್ದೇವೆ. ಆದರೆ ಇಂತಹ ದಿನಗಳ ಆಚರಣೆಯು ಆ ದಿನಕ್ಕಷ್ಟೇ ಸೀಮಿತವಾಗುತ್ತಿವೆ. ಇತ್ತೀಚೆಗೆ ಇಂತಹ ಆಚರಣೆಗಳೆಲ್ಲ ಸರಕಾರದ ಅನುದಾನ ವೆಚ್ಚ ಮಾಡಲಿಕ್ಕಷ್ಟೇ ಪ್ರಯೋಜನವಾಗುತ್ತದೆ ವಿನಃ ಅವುಗಳಿಂದಾಗುವ ಫಲಿತಾಂಶ ಮಾತ್ರ ಶೂನ್ಯ.

ಮೊನ್ನೆ ವಿಶ್ವ ಪರಿಸರ ದಿನಾಚರಣೆಯನ್ನು ಮನಪಾ ವತಿಯಿಂದ ಮಂಗಳೂರಿನಲ್ಲೂ ಆಚರಿಸಲಾಯಿತು. ಒಟ್ಟು 1,500 ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಒಳ್ಳೆಯದಾದರೂ ಹೊಸದಾಗಿ ಗಿಡ ನೆಡುವುದಕ್ಕಿಂತಲೂ ಇರುವ ಮರಗಳನ್ನು ಉಳಿಸಲು ನಾವೆಷ್ಟು ಪ್ರಯತ್ನಿಸಿದ್ದೇವೆ ಎಂದು ಚಿಂತಿಸಬೇಕಾಗಿದೆ.

ಕಳೆದ ಮೂರು ವರ್ಷಗಳಿಂದ ‘ಅಭಿವೃದ್ಧಿ’ಯ ಕಾರಣಗಳಿ ಗಾಗಿಯೇ ಸುಮಾರು 140 ಮರಗಳನ್ನು ಕಡಿಯಲಾಗಿದೆ. ಆದರೆ ಈ ಮರಗಳ ಜಾಗದಲ್ಲಿ ಎಷ್ಟು ಗಿಡಗಳು ಬೆಳೆದು ನಿಂತಿವೆ?

ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕಾರ ಒಂದು ಮರ ಕಡಿದ ವರ್ಷದೊಳಗೆ ಅದರ ಬದಲು ಕನಿಷ್ಠ ಎರಡು ಗಿಡಗಳನ್ನಾದರೂ ಬೆಳೆಸಬೇಕೆಂದು ನಿಯಮವಿದೆ. ಆದರೆ ನಮ್ಮಲ್ಲಿದು ನಡೆಯುತ್ತಿದೆಯೇ?

ಪರಿಸರ ಸಂರಕ್ಷಣೆ ಆಚರಣೆಗಳು ಕೇವಲ ತೋರಿಕೆಗಲ್ಲ. ಪರಿಸರ ಕಾಳಜಿಯಿಂದ ನಡೆಯಲಿ.

Writer - -ಜೆ. ಎಫ್. ಡಿ’ಸೋಜಾ, ಮಂಗಳೂರು

contributor

Editor - -ಜೆ. ಎಫ್. ಡಿ’ಸೋಜಾ, ಮಂಗಳೂರು

contributor

Similar News