×
Ad

ಯಡಿಯೂರಪ್ಪ ವಿರುದ್ಧ ಭೂ ಕಬಳಿಕೆ ಆರೋಪ: ಸಿಐಡಿ ತನಿಖೆಗೆ ಆಗ್ರಹಿಸಿ ಧರಣಿ

Update: 2017-06-10 17:49 IST

ಬೆಂಗಳೂರು, ಜೂ.10: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವರಾಮ ಕಾರಂತ ಬಡಾವಣೆಗೆ ಭೂ ಸ್ವಾಧೀನ ಪಡಿಸಿಕೊಂಡಿದ್ದ ಜಾಗದಲ್ಲಿ 257ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿರುವ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಲಿಂಗಾಯತ ಸಮುದಾಯದ ಮುಖಂಡರು, ಜನಸಾಮಾನ್ಯರ ವೇದಿಕೆ ಸದಸ್ಯರು ಧರಣಿ ನಡೆಸಿದರು.

ಶನಿವಾರ ನಗರದ ಮೌರ್ಯದಲ್ಲಿ ತಾತ್ಕಾಲಿಕ ಅನುಭವ ಮಂಟಪ ನಿರ್ಮಿಸಿ ಧರಣಿ ನಡೆಸಿದರು. ಅಧಿಕಾರ ವ್ಯಾಪ್ತಿಯನ್ನು ಮೀರಿ 1,500 ಕೋ. ರೂ. ಬೆಳೆಬಾಳುವ ಭೂಮಿಯನ್ನು ಡಿನೋಟಿಫೈ ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸಿಐಡಿ ತನಿಖೆ ನಡೆಸಬೇಕು ಎಂದು ಧರಣಿಯಲ್ಲಿ ಪಾಲ್ಗೊಂಡಿದ್ದ ಲಿಂಗಾಯಿತ ಸಮುದಾಯ ಮುಖಂಡರು ಒತ್ತಾಯಿಸಿದರು.

ಧರಣಿಯ ನೇತೃತ್ವ ವಹಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಡಾ.ಅಯ್ಯಪ್ಪ ದೊರೆ, ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ರೈತರ ವಿರೋಧದ ನಡುವೆಯೂ ಒಟ್ಟು 17 ಗ್ರಾಮಗಳ 3,546 ಎಕರೆ ಭೂಮಿಯನ್ನು ಭೂ ಸ್ವಾಧೀನ ಪಡಿಸಿಕೊಂಡಿದ್ದರು. ಈ ಬಡಾವಣೆಯ ಮಧ್ಯದಲ್ಲಿನ 257 ಎಕರೆ ಭೂಮಿಯನ್ನು ಬಿಡಿಎ ಅಧಿಕಾರಿಗಳ ಮೇಲೆ ಒತ್ತಡ ತಂದು ಅಕ್ರಮವಾಗಿ ಡಿನೋಟಿಫೈ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರಲ್ಲದೆ, ಪ್ರಕರಣದ ಸಂಬಂಧ ದಾಖಲೆಗಳನ್ನು ಬಿಡುಗಡೆಗೊಳಿಸಿದರು.

ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಪ್ರಕಣದ ಕುರಿತು ತನಿಖೆ ನಡೆಸುವಂತೆ ಸೂಚಿಸಿದರು. ಪ್ರಾಥಮಿಕ ತನಿಖೆಯಲ್ಲಿ ನೇರವಾಗಿ ಯಡ್ಡಿಯೂರಪ್ಪ ಅವರ ಕೈವಾಡವಿರುವುದು ಸಾಬೀತಾಗಿತ್ತು. ಆದರೆ ಈ ಕ್ರಮದ ಕುರಿತು ಎಫ್‌ಐಆರ್ ದಾಖಲಾಗದೇ ಇದುದ್ದರಿಂದ ಏಂಟು ವರ್ಷಗಳಿಂದ ಮೂಲೆಗುಂಪಾಗಿದೆ ಎಂದು ತಿಳಿಸಿದರು.

ಈಗ ಜನಪರ ವೇದಿಕೆಯ ಮೂಲಕ ಎಸಿಬಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೂಡಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸಿಐಡಿ ತನಿಖೆ ನಡೆಸಲು ಸೂಚನೆ ನೀಡಬೇಕು. ಇಲ್ಲವಾದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

 ಸರಕಾರದ ಮಾಜಿ ಉಪಕಾರ್ಯದರ್ಶಿ ಉಳುವಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ತನ್ನ ಅಧಿಕಾರ ವ್ಯಾಪ್ತಿ ಮೀರಿ ಡಿನೋಟಿಫೈ ಮಾಡಿರುವುದು ಖಚಿತ. ಇದರಿಂದ ಸರಕಾರದ ಬೊಕ್ಕಸಕ್ಕೆ ಸಾವಿರಾರೂ ಕೋಟಿ ರೂ. ನಷ್ಟ ಉಂಟುಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಿ ಅವರನ್ನು ಜೈಲುಗಟ್ಟಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News