×
Ad

ರಾಜಿ ತೀರ್ಮಾನ, ಮಧ್ಯಸ್ಥಿಕಾ ಸೌಲಭ್ಯ ಭಾರತ ನ್ಯಾಯಾಂಗದಲ್ಲಿನ ಅತ್ಯುತ್ತಮ ವ್ಯವಸ್ಥೆ: ನಾ. ಜಯಂತ್ ಪಟೇಲ್

Update: 2017-06-10 18:12 IST

ಹಾಸನ:ರಾಜಿ ತೀರ್ಮಾನ ಹಾಗು ಮಧ್ಯಸ್ಥಿಕಾ ಸೌಲಭ್ಯ ಭಾರತ ನ್ಯಾಯಾಂಗದಲ್ಲಿನ ಅತ್ಯುತ್ತಮ ವ್ಯವಸ್ಥೆಯಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನಾ. ಜಯಂತ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಾಸಿಕ ಲೋಕ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಉಚಿತವಾಗಿ ಕಾನೂನು ನೆರವು ಮತ್ತು ಮಧ್ಯಸ್ಥಿಕೆ ವ್ಯವಸ್ಥೆ ಕಲ್ಪಿಸಿರುವುದು ಇತರ ರಾಷ್ಟ್ರಗಳಿಗೂ ಮಾದರಿಯಾಗಿದ ಎಂದರು.

ರಾಜಿ ತೀರ್ಮಾನ ಮತ್ತು ಮಧ್ಯಸ್ಥಿಕಾ ವ್ಯವಸ್ಥೆ ಸಾರ್ವಜನಿಕರ ಸಮಯ ಹಣ ಸಂಬಂಧಗಳನ್ನು ಉಳಿಸುತ್ತದೆ . ಎಲ್ಲಾ ನ್ಯಾಯಾಲಯಗಳಲ್ಲಿ ಬರುವ ತೀರ್ಪಿನಿಂದ ಒಂದು ಬದಿಯವರಿಗೆ ಮಾತ್ರ ಸಂತೋಷವಾಗುತ್ತದೆ. ಆದರೆ ರಾಜಿ ತೀರ್ಮಾನದಿಂದ ಆಗುವ ಇತ್ಯರ್ಥಗಳಿಂದ ಎರಡು ಕಡೆಯವರಿಗೂ ಸಂತೋಷವಾಗುತ್ತದೆ ಎಂದು ಹೇಳಿದರು.

ವೈವಾಹಿಕ ಸಮಸ್ಯೆ ,ಕೌಟುಂಬಿಕ ಆಸ್ತಿ ವ್ಯಾಜ್ಯಗಳು , ವ್ಯಾಣಿಜ್ಯ ವ್ಯವಹಾರ ಸಾಲ ಮರುಪಾವತಿ ಪ್ರಕರಣಗಳನ್ನು ಮಧ್ಯಸ್ಥಿಕಾ ವ್ಯವಸ್ಥೆಯಿಂದ ಸುಲಭವಾಗಿ ಬಗೆಹರಿಸಬಹುದಾಗಿದೆ. ಇದರಿಂದ ಬಾಂಧವ್ಯ ಬೆಸೆಯುವ ಕೆಲಸ ಕೂಡ ಆಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷರಾದ ಬಿ.ಟಿ ಲಕ್ಷ್ಮೀನಾರಾಯಣ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಧ್ಯಸ್ಥಿಕಾ ವ್ಯವಸ್ತೆ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಈ ಕಾರ್ಯದಲ್ಲಿ ಪಿರ್ಯಾದುದಾರರು ಮತ್ತು ವಾದಿಗಳ ಜೊತೆಗೆ ವಕೀಲರು ಸಹ ಪ್ರಕರಣ ಇತ್ಯರ್ಥದ ನಂತರ ಒಂದು ಒಳ್ಳೆ ಕೆಲಸ ಮಾಡಿದ ತೃಪ್ತಿ ಭಾವನೆ ಹೊಂದುತ್ತಿದ್ದಾರೆ. ವಕೀಲರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ತೊಡಗಬೆಕು ಈ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ಮುಂದುವರೆಸಬೇಕು ಎಂದರು.


ಇದಾದ ಬಳಿಕ ಲೋಕ ಅದಾಲತ್‌ನಡಿ ಬ್ಯಾಂಕ್ ಪ್ರಕರಣಗಳು, ವ್ಯಾಜ್ಯ ಪೂರ್ವ ಪ್ರಕರಣಗಳು, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಚೆಕ್ ಬೋನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪ್ರಕರಣಗಳನ್ನು ಮದ್ಯಸ್ಥಿಕೆ ಸೌಲಭ್ಯದ ಮೂಲಕ ಬಗೆಹರಿಸಲಾಯಿತು.

ಜಿಲ್ಲಾ ಪ್ರಾಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರರಾದ ಅಧ್ಯಕ್ಷರಾದ ಕೃಷ್ಣಮೂರ್ತಿ ಸಂಗಣ್ಣನವರ್ ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ವಿಜಯಾನಂದ, ವಕೀಲರ ಸಂಘದ ಕಾರ್ಯದರ್ಶಿ ಸತೀಶ್ ಕಟ್ಟಾಯ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News