ಸಾಕ್ಷ ಸಂಗ್ರಹದಲ್ಲಿ ಪೊಲೀಸರ ವೈಫಲ್ಯ: ನ್ಯಾ.ಎಸ್.ಕೆ.ಮುಖರ್ಜಿ ಬೇಸರ
ಬೆಂಗಳೂರು, ಜೂ.10: ಅಪರಾಧ ಚಟುವಟಿಕೆಗಳ ಪ್ರಕರಣಗಳಲ್ಲಿ ಪೊಲೀಸರು ಸೂಕ್ತ ರೀತಿಯ ಕ್ರಮ ಕೈಗೊಂಡು ಸಾಕ್ಷ ಸಂಗ್ರಹಿಸದ ಕಾರಣ ಆರೋಪಿ ನಿರಪರಾಧಿಯಾಗಿ ಹೊರಬರುತ್ತಿದ್ದು, ಇದರಿಂದ ನ್ಯಾಯಾಲಯದ ಮೇಲೂ ವಿಶ್ವಾಸ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿರುವ 'ಅಪರಾಧ ನ್ಯಾಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಲಪಡಿಸುವಿಕೆ' ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಪರಾಧ ಪ್ರಕರಣಗಳಲ್ಲಿ ಅಪರಾಧಿಗೆ ಶಿಕ್ಷೆಯಾಗಬೇಕಾದರೆ ಪೊಲೀಸರ ಪಾತ್ರ ಬಹಳ ಮಹತ್ವದ್ದು. ಅದೇ ರೀತಿ, ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸರಿಯಾದ ತನಿಖೆ ನಡೆಸಿ ಸಾಕ್ಷ್ಯ ಸಂಗ್ರಹಿಸಿದರೆ ಅಪರಾಧಿಗೆ ಶಿಕ್ಷೆಯಾಗುತ್ತದೆ. ಆದರೆ, ಪೊಲೀಸರು ಇದರಲ್ಲಿ ವೈಫಲ್ಯ ಕಂಡರೆ ನ್ಯಾಯಾಲಯ ಕೂಡ ಆತನನ್ನು ಶಿಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಅಪರಾಧ ಪ್ರಕರಣಗಳ ತನಿಖೆ ವಿಳಂಬವಾಗುತ್ತಿರುವುದರಿಂದ ಸಾಕ್ಷಗಳು ನಾಶವಾಗುತ್ತವೆ ಅಥವಾ ಸಾಕ್ಷಿ ಆ ಪ್ರಕರಣದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಕೆಲವೊಂದು ಪ್ರಕರಣಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬರುವುದಕ್ಕೆ ವರ್ಷಗಳೇ ಹಿಡಿಯುತ್ತವೆ. ಆಗ ತನಿಖಾಧಿಕಾರಿ ನಿವೃತ್ತಿ ಹೊಂದಿರುತ್ತಾನೆ. ಇದರಿಂದ ಆತನೂ ಆಸಕ್ತಿ ಕಳೆದುಕೊಳ್ಳುತ್ತಾನೆ. ಇದರಿಂದ ಆರೋಪಿ ನಿರಪರಾಧಿಯಾಗುತ್ತಾನೆ ಎಂದು ವಿವರಿಸಿದರು.