×
Ad

​ಪರಿಸರ ರಕ್ಷಣೆಗೆ ಆಂದೋಲನ ಅಗತ್ಯ: ಡಿ.ವಿ.ಸದಾನಂದಗೌಡ

Update: 2017-06-10 18:36 IST

ಬೆಂಗಳೂರು, ಜೂ.10: ಪರಿಸರ ಸಂರಕ್ಷಣೆಯನ್ನು ಸ್ವಾತಂತ್ರ ಸಂಗ್ರಾಮದಂತೆ ಸಾಮಾಜಿಕ ಆಂದೋಲನವಾಗಿ ರೂಪುಗೊಳಿಸದಿದ್ದರೆ ಭವಿಷ್ಯದಲ್ಲಿ ಜಗತ್ತು ಉಳಿಯುವುದೆ ಕಷ್ಟ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ‘ಹಸಿರು ಹೆಬ್ಬಾಳ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂದು ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಭಾರತೀಯರೆಲ್ಲರೂ ಸಂಗ್ರಾಮವನ್ನೆ ಆರಂಭಿಸಿದರು. ಇದರ ಪರಿಣಾಮ ನಮಗೆ ಸ್ವಾತಂತ್ರ್ಯ ದೊರೆತು ಬ್ರಿಟಿಷರ ದಾಸ್ಯದಿಂದ ಮುಕ್ತರಾದೆವು. ಈಗ ಪರಿಸರ ಸಂರಕ್ಷಣೆಯು ಈ ಆಂದೋಲನದಂತೆ ಆರಂಭವಾಗಬೇಕಿದೆ ಎಂದರು.

ಜಾಗತಿಕ ತಾಪಮಾನದ ಪರಿಣಾಮ ಹಿಮಾಲಯದಂತಹ ಪರ್ವತಗಳೆ ಕರಗುವ ಹಂತ ತಲುಪಿವೆ. ಮನುಷ್ಯನ ಕುಡಿಯುವ ನೀರು ಕಲುಷಿತಗೊಂಡು ದಶಕಗಳಾಗಿವೆ. ಇನ್ನು ಉಸಿರಾಡುವ ಗಾಳಿಯಲ್ಲೂ ನೂರಾರು ಕ್ರಿಮಿಕೀಟಗಳು ಸೇರಿಕೊಂಡಿವೆ. ಇದರ ಪರಿಣಾಮವೇ ಸೊಂಕುರೋಗ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ವಿಷಾದಿಸಿದರು.
 
 ಇಡೀ ವಿಶ್ವಕ್ಕೆ ದೊಡ್ಡ ಸಮಸ್ಯೆ ಎಂದರೆ ಪರಿಸರ ಸಂರಕ್ಷಣೆ. ವಿಶ್ವದ ಅನೇಕ ಮುಂದುವರಿದ ರಾಷ್ಟ್ರಗಳು ಹಲವಾರು ತುರ್ತು ಕ್ರಮಗಳನ್ನು ಕೈಗೊಂಡಿದ್ದರೂ ನಿರೀಕ್ಷಿತ ಫಲಿತಾಂಶ ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳು ಪ್ರಾರಂಭಿಕ ಹಂತದಲ್ಲಿ ಪರಿಸರ ರಕ್ಷಣೆಗೆ ಮುಂದಾಗಬೇಕು. ಕೇವಲ ಪಠ್ಯ ಪುಸ್ತಕದಲ್ಲಿ ಓದಿದರೆ ಏನೂ ಪ್ರಯೋಜನವಿಲ್ಲ. ನಮ್ಮ ಮನೆ ಹೇಗೆ ಸ್ವಚ್ಛವಾಗಿರಬೇಕೆಂದು ಭಾವಿಸುತ್ತೇವೋ, ಅದೇ ರೀತಿ ದೇಶವು ಮಾಲಿನ್ಯದಿಂದ ಮುಕ್ತವಾಗಬೇಕೆಂಬ ಮನೋಭಾವನೆ ಎಲ್ಲರಲ್ಲೂ ಬರಬೇಕು. ಆಗ ಮಾತ್ರ ಉದ್ದೇಶಿತ ಗುರಿ ಈಡೇರುತ್ತದೆ ಎಂದು ಸದಾನಂದಗೌಡ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪರಿಸರವಾದಿ ಸಾಲಮರದ ತಿಮ್ಮಕ್ಕ, ಶಾಸಕ ವೈ.ಎ.ನಾರಾಯಣಸ್ವಾಮಿ, ಬಿಬಿಎಂಪಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News