ಆರ್ಡರ್ಲಿ ಪದ್ಧತಿ ಇನ್ನುಮುಂದೆ ಇರುವುದಿಲ್ಲ: ಡಾ.ಪರಮೇಶ್ವರ್
ಬೆಂಗಳೂರು, ಜೂ.10: ಪೊಲೀಸ್ ಸಿಬ್ಬಂದಿಗಳನ್ನು ತಮ್ಮ ವೈಯಕ್ತಿಕ ಮನೆಗೆಲಸಗಳಿಗೆ ಬಳಸುವ ಆರ್ಡರ್ಲಿ ಪದ್ಧತಿ ಎಂಬುದು ಪೊಲೀಸ್ ಇಲಾಖೆಯಲ್ಲಿರುವ ಕೆಟ್ಟಪದ್ಧತಿಯಾಗಿದ್ದು, ರಾಜ್ಯದಲ್ಲಿ ಈಗಲೂ 3 ಸಾವಿರ ಪೊಲೀಸ್ ಸಿಬ್ಬಂದಿಗಳು ಆರ್ಡರ್ಲಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ, ಅವರನ್ನು ಆರ್ಡರ್ಲಿಯಿಂದ ಬೇರೆ ಕೆಲಸಕ್ಕೆ ನಿಯೋಜನೆ ಮಾಡುವ ಕಾರ್ಯ ನಡೆಯುತ್ತಿದ್ದು, ಮುಂದೆ ಇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 3 ಸಾವಿರ ಸಿಬ್ಬಂದಿ ಆರ್ಡರ್ಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಆರ್ಡರ್ಲಿಯಿಂದ ಬೇರೆ ಕೆಲಸಕ್ಕೆ ನಿಯೋಜನೆ ಮಾಡುವ ಕಾರ್ಯ ನಡೆಯುತ್ತಿದೆ. ಹಿರಿಯ ಅಧಿಕಾರಿಗಳಿಗೆ ಸಹಾಯಕ ಸಿಬ್ಬಂದಿಗಳ ಅವಶ್ಯಕತೆಯಿದೆ ಎಂದು ಹೇಳಿದರು.
ಆರ್ಡರ್ಲಿ ಪದ್ಧತಿ ಬದಲಾಗಿ ಫಾಲೋವರ್ಸ್‌ಹೆಸರಿನ ಹುದ್ದೆಯಡಿ ಡಿ ದರ್ಜೆ ಸಿಬ್ಬಂದಿ ನೇಮಕ ಮಾಡಲಾಗುವುದು. ಈಗಾಗಲೇ ಈ ಬಗ್ಗೆ ಶಿಫಾರಸು ಮಾಡಲಾಗಿದ್ದು, ಹಂತ ಹಂತವಾಗಿ ಇದನ್ನು ಕೊನೆಗಾಣಿಸಲಾಗುವುದು. ಆದಷ್ಟು ಬೇಗ ಆರ್ಡರ್ಲಿ ಪದ್ಧತಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಬದಲಾಗಿ ಆ ಕೆಲಸಕ್ಕೆ ಡಿ ದರ್ಜೆಯ ಸಿಬ್ಬಂದಿಗಳನ್ನು ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.