ಎರಡು ಕೋಮುಗಳ ನಡುವೆ ಹೊಡೆದಾಟ: ಮುಝಫ್ಫರ್ ನಗರ ಉದ್ರಿಕ್ತ

Update: 2017-06-11 18:44 GMT

ಮುಝಫ್ಫರ್ ನಗರ, ಜೂ.11: ಯುವತಿಗೆ ಕಿರುಕುಳ ನೀಡಿದ ಪ್ರಕರಣವೊಂದಕ್ಕೆ ಸಂಬಂಧಿಸಿ ಎರಡು ಕೋಮುಗಳ ನಡುವೆ ನಡೆದ ಹೊಡೆದಾಟದಲ್ಲಿ 8 ಮಂದಿ ಗಾಯಗೊಂಡ ಘಟನೆ ಮುಝಫ್ಫರ್ ನಗರದ ಲಾಡ್ವಾ ಗ್ರಾಮದಲ್ಲಿ ನಡೆದಿದೆ.

ನಳ್ಳಿಯಿಂದ ನೀರು ತರಲು ತೆರಳಿದ್ದ 15 ವರ್ಷದ ಬಾಲಕಿಗೆ ಯುವಕರಿಬ್ಬರು ಕಿರುಕುಳ ನೀಡಿದ್ದು, ಈ ಬಗ್ಗೆ ಬಾಲಕಿ ಮನೆಯವರಲ್ಲಿ ತಿಳಿಸಿದ್ದಳು. ಇದರಿಂದ ಕೆರಳಿದ ಮನೆಯವರು ಯುವಕರು ಹಾಗೂ ಅವರ ಕುಟುಂಬಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂದರ್ಭ ನಡೆದ ಮಾತಿನ ಚಕಮಕಿ ಹೊಡೆದಾಟಕ್ಕೆ ಕಾರಣವಾಗಿತ್ತು. ಎರಡೂ ಗುಂಪುಗಳು ಪರಸ್ಪರ ಕಲ್ಲು, ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಹರಿರಾಮ್ ಹೇಳಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

ಇನ್ನೊಂದು ಘಟನೆಯಲ್ಲಿ 35 ವರ್ಷದ ಮಹಿಳೆಗೆ ಬೈಕ್ ನಲ್ಲಿ ಬಂದ ಇಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಮಹಿಳೆ ವಿರೋಧಿಸಿದ್ದು, ಯುವಕರು ಆಕೆಗೆ ಹೊಡೆದು ಬಟ್ಟೆಯನ್ನು ಹರಿದುಹಾಕಿದ್ದಾರೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News