ಸತ್ಯ ಹೇಳಲು ಭಯಪಡುವ ಪರಿಸ್ಥಿತಿ: ರಾಹುಲ್‌ಗಾಂಧಿ
ಬೆಂಗಳೂರು, ಜೂ.12: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಆಡಳಿತದಲ್ಲಿ ಪತ್ರಕರ್ತರಿಗೆ ಸತ್ಯಗೊತ್ತಿದ್ದರೂ ಅದನ್ನು ಹೇಳಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಮಿಲ್ಲರ್ಸ್ ರಸ್ತೆಯಲಿರುವ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ದಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಸ್ಮರಣ ಸಂಚಿಕೆ ‘ಕವಲು ದಾರಿಯಲ್ಲಿ ಭಾರತ-ಸ್ವಾತಂತ್ರದ 70 ವರ್ಷಗಳು’ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಸಾವಿರಾರು ಪತ್ರಕರ್ತರಿದ್ದಾರೆ. ಆದರೆ, ತಮಗೆ ಬೇಕಾದ್ದನ್ನು ಬರೆಯಲು ಅವರಿಗೆ ಸ್ವಾತಂತ್ರವಿಲ್ಲ. ಸತ್ಯ ಹೇಳುವವರನ್ನು ಸುಮ್ಮನಾಗಿರಿಸಲು, ಮೂಲೆ ಗುಂಪು ಮಾಡಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಲ್ಪಸಂಖ್ಯಾತರು ಭಯಬೀತರಾಗಿದ್ದಾರೆ. ಪತ್ರಕರ್ತರು ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ನ್ಯಾಷನಲ್ ಹೆರಾಲ್ಡ್ ಯಾರಿಗೂ ಹೆದರುವುದಿಲ್ಲ. ಸತ್ಯವನ್ನು ಹೇಳಲು ಹಿಂಜರಿಯುವುದಿಲ್ಲ. ಅಗತ್ಯ ಸಂದರ್ಭ ಬಂದರೆ ನಮ್ಮನ್ನು ಟೀಕಿಸಬಹುದು ಎಂದು ಪತ್ರಿಕೆಯ ಸಂಪಾದಕರಿಗೆ ತಿಳಿಸಿದ್ದೇನೆ. ಸತ್ಯವನ್ನು ಹೇಳುವವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಅವರು ಹೇಳಿದರು.
ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಕ್ತವಾಗಿ ಬರೆಯಲು ಪತ್ರಕರ್ತರಿಗೆ ಸ್ವಾತಂತ್ರವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ರೈತರ ಮೇಲೆ ನಡೆದ ಗೋಲಿಬಾರ್ ಅನ್ನು ಖಂಡಿಸಿದ ರಾಹುಲ್‌ಗಾಂಧಿ, ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಲು ನನಗೆ ಅವಕಾಶ ನೀಡಲಿಲ್ಲ. ಯಾವ ಕಾರಣಕ್ಕಾಗಿ ನನ್ನನ್ನು ತಡೆದರು ಎಂಬುದು ಗೊತ್ತಾಗುತ್ತಿಲ್ಲ ಎಂದರು.
ಸ್ವಾತಂತ್ರ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖವಾದದ್ದು. ಜವಾಹರ್‌ಲಾಲ್ ನೆಹರು ಹಾಗೂ ಸ್ವಾತಂತ್ರ ಹೋರಾಟಗಾರರಾದ ಪುರುಷೋತ್ತಮ್‌ದಾಸ್ ಟಂಡನ್, ಆಚಾರ್ಯ ನರೇಂದ್ರದೇವ್, ಕೈಲಾಶ್ ಕಾಟ್ಜು, ರಫಿ ಅಹ್ಮದ್ ಕಿದ್ವಾಯಿ, ಕೃಷ್ಣದತ್ ಪಾಲಿವಾಲ್ ಹಾಗೂ ಗೋವಿಂದ ಬಲ್ಲಭ್ ಪಂತ್ ಸೇರಿ 1937ರಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸ್ಥಾಪಿಸಿದರು. ಅದರಡಿಯಲ್ಲಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹೊರ ತಂದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪತ್ರಿಕಾ ಸ್ವಾತಂತ್ರದ ವಿಚಾರದಲ್ಲಿ ನ್ಯಾಷನಲ್ ಹೆರಾಲ್ಡ್ ಯಾವತ್ತಿದ್ದರೂ ಚಾಂಪಿಯನ್. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ದೇಶದ ಧ್ವನಿಯಾಗಿ ಕಾರ್ಯನಿರ್ವಹಿಸಿತ್ತು. ಕ್ವಿಟ್ ಇಂಡಿಯಾ ಸೇರಿದಂತೆ ಹಲವು ರಾಜಕೀಯ ಕಾರಣಗಳಿಂದ ಪತ್ರಿಕೆ ಸ್ಥಗಿತಗೊಂಡಿತ್ತು ಎಂದು ಅವರು ಹೇಳಿದರು.
ಪತ್ರಿಕೆಗಳು ಸ್ವತಂತ್ರವಾಗಿರಬೇಕು. ಯಾವುದೆ ರಾಜಕೀಯ ಪಕ್ಷದಿಂದ ಪ್ರಭಾವಿತವಾಗಿರಬಾರದು ಎಂಬ ಕಾರಣಕ್ಕಾಗಿ 1947ರಲ್ಲಿ ಜವಾಹರ್‌ಲಾಲ್ ನೆಹರು ದೇಶದ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆ ನ್ಯಾಷನಲ್ ಹೆರಾಲ್ಡ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆನಂತರ, ಎಂದಿಗೂ ಸಂಪಾದಕೀಯ ನೀತಿಗಳಲ್ಲಿ ಹಸ್ತಕ್ಷೇಪ ನಡೆಸಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಮತ್ತೆ ಆರಂಭಿಸುತ್ತಿರುವುದು ಮಹತ್ವದ ಕಾರ್ಯ. ಸ್ವಾತಂತ್ರ ಹೋರಾಟದಲ್ಲಿ ಎಲ್ಲರ ದನಿಯಾಗಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಈಗಲೂ ಸಮಾಜಕ್ಕೆ ಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
70 ವರ್ಷಗಳ ಇತಿಹಾಸವಿರುವ ಪತ್ರಿಕೆ ಬೆಂಗಳೂರಿನಲ್ಲಿ ಪುನರಾರಂಭಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಸ್ವಾತಂತ್ರ, ಸಮಾನತೆ, ಸಾಮಾಜಿಕ ನ್ಯಾಯದ ಪರವಾಗಿರುವ ಈ ಪತ್ರಿಕೆಯೊಂದಿಗೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯೊಂದಿಗೆ ಅದರ ನವ್‌ಜೀವನ್ ಹಿಂದಿ ಹಾಗೂ ಖೌಮಿ ಆವಾಝ್ ಉರ್ದು ಪತ್ರಿಕೆಯನ್ನು ಹೊರತರಲಾಗುತ್ತಿತ್ತು ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅಧ್ಯಕ್ಷ ಮೋತಿಲಾಲ್ ವೋರಾ, ನಿರ್ದೇಶಕ ಆಸ್ಕರ್ ಫರ್ನಾಂಡೀಸ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ದಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಧಾನ ಸಂಪಾದಕ ನೀಲಭ್ ಮಿಶ್ರಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.