ತುಂಗಭದ್ರಾ: ಹೂಳೆತ್ತುವ ಕಾರ್ಯ ಕಷ್ಟಸಾಧ್ಯ: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು, ಜೂ. 12: ತುಂಗಭದ್ರಾ ಜಲಾಶಯದಲ್ಲಿ ಶೇಖರಣೆ ಆಗಿರುವ ಹೂಳನ್ನು ತೆಗೆಯುವುದು ಕಾರ್ಯ ಸಾಧುವಲ್ಲ. ಹೀಗಾಗಿ ತುಂಗಾಭದ್ರಾ ಎಡದಂಡೆ ಕಾಲುವೆಗೆ ಸಮಾನಾಂತರವಾಗಿ ನವಲಿ ಬಳಿಕ ಮೇಲ್ಮಟ್ಟದ ಕಾಲುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಪ್ರತಾಪಗೌಡ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಜಲಾಶಯದಲ್ಲಿ 32 ಟಿಎಂಸಿಯಷ್ಟು ಹೂಳು ತುಂಬಿದೆ. ಇದನ್ನು ಹೊರತೆಗೆಯುವುದು ಕಷ್ಟಸಾಧ್ಯ. ಹೂಳನ್ನು ಹೊರ ತೆಗೆಯಲು ಜಲಾಶಯದ ಅಚ್ಚುಕಟ್ಟು ಪ್ರದೇಶದಷ್ಟೆ ಜಮೀನಿನ ಅಗತ್ಯವಿದೆ. ಮಾತ್ರವಲ್ಲ ಇದರಿಂದ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿದರು.
ರೈತ ಸಂಘಟನೆಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹೂಳೆತ್ತುವ ಕಾರ್ಯಕ್ಕೆ ಕೈಹಾಕಿರುವುದು ಸ್ವಾಗತಾರ್ಹ. ಆದರೆ, ಪ್ರಸ್ತುತ ಅವರು ಹೂಳೆತ್ತಿರುವುದು 0.001 ಟಿಎಂಸಿಯಷ್ಟು. ಇದರ ಪ್ರಮಾಣ 1ಸಾವಿರಕ್ಕೆ ಒಂದು ಭಾಗದಷ್ಟಾಗಿದೆ ಎಂದು ವಿಶ್ಲೇಷಿಸಿದರು.
ಜಲಾಶಯದ ಹೂಳು ತೆಗೆಯಲು ಜಾಗತಿಕ ಗುತ್ತಿಗೆದಾರರನ್ನು ಆಹ್ವಾನಿಸಲಾಗಿತ್ತು. ಆದರೂ ಟೆಂಡರ್ ಪ್ರಕ್ರಿಯೆಯಲ್ಲಿ ಯಾರೂ ಭಾಗವಹಿಸಲಿಲ್ಲ. ಇದರ ಸಮೀಕ್ಷೆ ನಡೆಸಿದ ನಂತರ ಇದು ಸಾಧುವಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸರಕಾರವೆ ಈ ಕೆಲಸವನ್ನು ಕೈಗೆತ್ತಿಕೊಳ್ಳಲು ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಅದರಿಂದಲೂ ಪ್ರಯೋಜನವಿಲ್ಲ ಎಂದು ಹೇಳಿದರು.
ತುಂಗಭದ್ರಾ ಎಡದಂಡೆ ಕಾಲುವೆಗೆ ಸಮಾನಾಂತರವಾಗಿ ‘ನವಲಿ’ ಎಂಬಲ್ಲಿ ಮೇಲ್ಮಟ್ಟದ ಕಾಲುವೆ ನಿರ್ಮಿಸಿ ಮಳೆಗಾಲದಲ್ಲಿ ನೀರನ್ನು ಶೇಖರಿಸಿ ಬಳಸಬಹುದು ಎಂಬ ಪ್ರಸ್ತಾವನೆ ನೀರಾವರಿ ನಿಗಮದ ಪರಿಶೀಲನೆಯಲ್ಲಿದೆ ಎಂದ ಅವರು, ತುಂಗಭದ್ರಾ ಅಂತಾರಾಜ್ಯ ಯೋಜನೆಯಾಗಿದ್ದು, ಸರಕಾರದ ಪ್ರಸ್ತಾವನೆಗೆ ತುಂಗಭದ್ರಾ ಮಂಡಳಿಯ ಅನುಮೋದನೆ ಪಡೆಯಬೇಕಾಗಿದೆ.
ಮಂಡಳಿಯಲ್ಲಿ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಪ್ರತಿನಿಧಿಗಳು ಇರುತ್ತಾರೆ. 40 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ನವಲಿ ಯೋಜನೆಗೆ 5,600 ಕೋಟಿ ರೂ.ಗಳಷ್ಟು ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಪಾಟೀಲ್ ವಿವರಿಸಿದರು.
ಆರಂಭಕ್ಕೆ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ಹಂಪನಗೌಡ ಬಾದರ್ಲಿ, ಹೂಳೆತ್ತುವುದಕ್ಕೆ ಪರ್ಯಾಯವಾಗಿ ಯಾವುದೇ ಯೋಜನೆಗಳನ್ನು ಸರಕಾರ ಜಾರಿಗೆ ತರಲು ಚಿಂತನೆ ನಡೆಸಿದ್ದರೆ ಅವುಗಳನ್ನು ತುರ್ತಾಗಿ ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸದಸ್ಯ ಬಸವರಾಜ ಬೊಮ್ಮಾಯಿ, ನವಲಿ ಯೋಜನೆ ಜಾರಿ ಸಂಬಂಧ ಮುಂದಿನ ಮಂಡಳಿ ಸಭೆಯಲ್ಲಿ ಚರ್ಚಿಸಿ ತುರ್ತು ನಿರ್ಧಾರ ಕೈಗೊಳ್ಳಬೇಕು. ತಮ್ಮ ಸರಕಾರ ಆಡಳಿತದಲ್ಲಿದ್ದಾಗ ಹೂಳೆತ್ತುವ ವಿಚಾರದ ಬಗ್ಗೆ ಹಲವು ರೀತಿಯಲ್ಲಿ ಪರಿಶೀಲಿಸಿದ್ದು, ಅದು ಕಾರ್ಯಸಾಧುವಲ್ಲವೆಂದು ಕೈಬಿಡಲಾಗಿದೆ ಎಂದರು.