×
Ad

ವೃತ್ತಪತ್ರಿಕೆಗಳು ಲಾಭಗಳಿಕೆಯ ಸಾಧನವಾಗಬಾರದು: ಉಪರಾಷ್ಟ್ರಪತಿ

Update: 2017-06-12 20:28 IST

ಬೆಂಗಳೂರು, ಜೂ.12: ವೃತ್ತಪತ್ರಿಕೆಗಳನ್ನು ಲಾಭಗಳಿಕೆಯ ಸಾಧನವಾಗಿ ಪರಿಗಣಿಸಿದರೆ, ಗಂಭೀರ ಸ್ವರೂಪದ ಅಕ್ರಮಗಳಾಗುವ ಸಾಧ್ಯತೆಯಿದೆ ಎಂದು ಉಪರಾಷ್ಟ್ರಪತಿ ಮುಹಮ್ಮದ್ ಹಾಮೀದ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ಮಿಲ್ಲರ್ಸ್‌ ರಸ್ತೆಯಲಿರುವ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ದಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ‘ಕವಲು ದಾರಿಯಲ್ಲಿ ಭಾರತ-ಸ್ವಾತಂತ್ರದ 70 ವರ್ಷಗಳು’ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಅಕ್ರಮಗಳು ಎಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದನ್ನು ಪತ್ರಿಕೋದ್ಯಮದಲ್ಲಿ ಸ್ವಲ್ಪಮಟ್ಟಿನ ಅನುಭವ ಹೊಂದಿರುವವರಿಗೆ ಸಾಬೀತುಪಡಿಸುವ ಅಗತ್ಯವಿಲ್ಲ. ಮುಕ್ತ ಸಮಾಜಕ್ಕೆ ಸ್ವತಂತ್ರ ಮಾಧ್ಯಮ ಪ್ರಯೋಜನಕಾರಿ ಮಾತ್ರವಲ್ಲ, ಅವಶ್ಯ ಕೂಡ. ಪತ್ರಿಕಾ ಸ್ವಾತಂತ್ರಕ್ಕೆ ಧಕ್ಕೆಯಾದರೆ ನಾಗರಿಕರ ಹಕ್ಕುಗಳು ಗಂಡಾಂತರಕ್ಕೀಡಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ನ್ಯಾಯಸಮ್ಮತವಲ್ಲದ ನಿರ್ಬಂಧಗಳು ಹಾಗೂ ದಾಳಿಯ ಭೀತಿಯ ಸಂದರ್ಭದಲ್ಲಿ ಮಾಧ್ಯಮಗಳಲ್ಲಿನ ಸ್ವಯಂ ನಿಯಂತ್ರಣ ವ್ಯತಿರಿಕ್ತ ಪರಿಣಾಮ ಬೀರಿ ದುರಾಚಾರವನ್ನು ಮುಚ್ಚಿಹಾಕಲು ನೆರವಾಗುವುದಲ್ಲದೆ ಉಪೇಕ್ಷಿತ ಸಮುದಾಯಗಳಲ್ಲಿ ಹತಾಶೆಯನ್ನು ಹೆಚ್ಚಿಸಬಹುದು ಎಂದು ಹಾಮೀದ್ ಅನ್ಸಾರಿ ಆತಂಕ ವ್ಯಕ್ತಪಡಿಸಿದರು.

‘ಜಾಹೀರಾತು ರೂಪದ ಸಂಪಾದಕೀಯಗಳು’ ಮತ್ತು ‘ಪತ್ರಿಕ್ರಿಯೆ ನುಡಿ ಚಿತ್ರಗಳು’ ಸಂಪಾದಕೀಯವನ್ನು ನೇಪಥ್ಯಕ್ಕೆ ಸರಿಸುತ್ತಿರುವ ‘ಸತ್ಯೋತ್ತರ’ ಮತ್ತು ‘ಪರ್ಯಾಯ ಸತ್ಯಾಂಶ’ಗಳ ಈ ಕಾಲದಲ್ಲಿ, ಪತ್ರಿಕಾರಂಗ ಗಣತಂತ್ರ ವ್ಯವಸ್ಥೆಯ ಕಾವಲುಗಾರನ ಪಾತ್ರ ವಹಿಸಬೇಕೆಂಬ ನೆಹರು ಅವರ ಮುನ್ನೋಟವನ್ನು ನೆನಪಿಸುವುದು ಹಾಗೂ ಅವರ ಪತ್ರಿಕೋದ್ಯಮವನ್ನು ಸಬಲಗೊಳಿಸಿದ ತತ್ವಾದರ್ಶಗಳನ್ನು ಗಮನಿಸುವುದು ಅಗತ್ಯವೆನಿಸುತ್ತದೆ ಎಂದು ಅವರು ಹೇಳಿದರು.

ಮಾಧ್ಯಮ ಪ್ರಜಾಸತ್ತೆಯ ಆಧಾರಸ್ತಂಭವೆಂಬುದು ನೆಹರು ನಂಬಿಕೆಯಾಗಿತ್ತು. ಅವರು ಮುಕ್ತ, ಸ್ವತಂತ್ರ ಹಾಗೂ ಪ್ರಾಮಾಣಿಕ ಪತ್ರಿಕಾರಂಗದ ಪ್ರತಿಪಾದಕರಾಗಿದ್ದರು. ಅವರು ಸ್ವತಂತ್ರ ಭಾರತದಲ್ಲಿ ಮಾಧ್ಯಮ ರಂಗದಲ್ಲಿರುವವರ ಹಿತಾಸಕ್ತಿಯನ್ನು ಕಾಯುತ್ತಿದ್ದರು. ಪತ್ರಕರ್ತರಿಗೆ ತಕ್ಕಮಟ್ಟಿನ ರಕ್ಷಣೆ ಹಾಗೂ ಪತ್ರಿಕಾ ಸ್ವಾತಂತ್ರವನ್ನು ಖಾತ್ರಿಪಡಿಸುವ ಕಾರ್ಯನಿರತ ಪತ್ರಕರ್ತರ ಕಾಯಿದೆ ಬಹುಮಟ್ಟಿಗೆ ಅವರದೆ ಕೊಡುಗೆ ಎಂದು ಅವರು ಸ್ಮರಿಸಿಕೊಂಡರು.

ಇದು ನಮ್ಮ ಸ್ವಾತಂತ್ರದ 70ನೆ ವರ್ಷ ಹಾಗೂ ನ್ಯಾಷನಲ್ ಹೆರಾಲ್ಡ್ ಸ್ಮರಣಾರ್ಥ ಸಂಚಿಕೆಯೊಂದಿಗೆ ಸಕ್ರಿಯ ಮಾಧ್ಯಮ ವಲಯಕ್ಕೆ ಹಿಂದಿರುಗುತ್ತಿರುವುದು ಸಂಭ್ರಮಾಚರಣೆಗೆ ಯೋಗ್ಯವೆನಿಸಿದೆ. ಜವಾಹರ್‌ಲಾಲ್ ನೆಹರು ಅವರ ಪರಿಕಲ್ಪನೆಯ ನ್ಯಾಷನಲ್ ಹೆರಾಲ್ಡ್ 1938ರಲ್ಲಿ ಲಖ್ನೌನಲ್ಲಿ ಪ್ರಕಟಣೆ ಆರಂಭಿಸಿ, ಬಹುಬೇಗನೆ ನಮ್ಮ ಸ್ವಾತಂತ್ರ ಚಳವಳಿಯ ದನಿಯಾಗಿ ರೂಪುಗೊಂಡಿತು. ‘ಗಂಡಾಂತರದಲ್ಲಿ ಸ್ವಾತಂತ್ರ’ ಎಂಬ ಅದರ ಪ್ರಧಾನ ಶಿರೋನಾಮೆ ಪ್ರತಿರೋಧದ ಪ್ರಸ್ತುತತೆಯನ್ನು ಹೊಂದಿದೆ ಎಂದು ಅವರು ಹೇಳಿದರು.

ನ್ಯಾಷನಲ್ ಹೆರಾಲ್ಡ್ ಮುದ್ರಣ ಮತ್ತು ಡಿಜಿಟಲ್ ಎರಡೂ ಪ್ರಕಾರಗಳಲ್ಲಿ ಪ್ರಕಾಶನ ಪುನರಾರಂಭಿಸುತ್ತಿರುವುದು ಸಂತೋಷ. ಇದು ಜವಾಹರಲಾಲ್ ನೆಹರು ತಮ್ಮ ವೃತ್ತಪತ್ರಿಕೆಯಲ್ಲಿ ನೆಲೆಗೊಳಿಸಿದ್ದ ಪತ್ರಿಕೋದ್ಯಮದ ಗುಣಧರ್ಮಗಳನ್ನು ಎತ್ತಿಹಿಡಿಯುವ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ ಎಂದು ಹಾಮೀದ್ ಅನ್ಸಾರಿ ಹೇಳಿದರು.

ಇಂದು ನಮ್ಮ ಸ್ವಾತಂತ್ರ ಸಂಗ್ರಾಮದ ವಿದ್ಯಾಮಾನವೊಂದರ ಪುನರುಜ್ಜೀವನ ಹಾಗೂ ಉದ್ದೇಶವೊಂದಕ್ಕೆ ಬದ್ಧರಾಗಿರುವ ಜನರ ಕೈಯಲ್ಲಿರುವ ಮಾಧ್ಯಮ, ಜನತೆಯನ್ನು ಪ್ರೇರೇಪಿಸುವಲ್ಲಿ ವಹಿಸಬಲ್ಲ ಪಾತ್ರದ ಬಗ್ಗೆ ಯುವ ಪೀಳಿಗೆಗೆ ನೆನಪಿಸುವ ಅವಿಸ್ಮರಣೀಯ ದಿನ ಎಂದು ಹಾಮೀದ್ ಅನ್ಸಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದಲ್ಲಿ ಪ್ರತಿಕೋದ್ಯಮದ ಇತಿಹಾಸ ನಮ್ಮ ಸ್ವಾತಂತ್ರ ಹೋರಾಟದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಭಾರತೀಯ ಪತ್ರಕರ್ತರು ಕೇವಲ ಸುದ್ದಿಯನ್ನು ನೀಡುವವರಷ್ಟೇ ಆಗಿರಲಿಲ್ಲ. ಅವರು ದೇಶವನ್ನು ವಿದೇಶಿ ಆಡಳಿತದಿಂದ ಪಾರು ಮಾಡಲು ಹೋರಾಡಿದ ಸ್ವಾತಂತ್ರ ಹೋರಾಟಗಾರರಾಗಿದ್ದರು. ನಮ್ಮ ಸಮಾಜದಿಂದ ಮೂಢನಂಬಿಕೆ, ಜಾತೀಯತೆ, ಕೋಮುವಾದ ಹಾಗೂ ತಾರತಮ್ಯ ತೊಡೆದು ಹಾಕಲು ಪರಿಶ್ರಮಪಟ್ಟ ಸಾಮಾಜಿಕ ಕಾರ್ಯಕರ್ತರೂ ಆಗಿದ್ದರು ಎಂದು ಅವರು ಹೇಳಿದರು.

ನಮ್ಮ ಜನರನ್ನು ಸುಶಿಕ್ಷಿತರನ್ನಾಗಿ ಮಾಡುವಲ್ಲಿ, ಅವರಲ್ಲಿ ಅರಿವು ಮೂಡಿಸಿ ಸಂಘಟಿಸುವಲ್ಲಿ ಪತ್ರಿಕಾರಂಗ ಮಹತ್ವದ ಪಾತ್ರ ವಹಿಸಿತ್ತು. 1885ರಲ್ಲಿ ಕಾಂಗ್ರೆಸ್‌ನ ಅನೇಕ ಸಂಸ್ಥಾಪಕ ಸದಸ್ಯರ ಪೈಕಿ ಹಲವರು ಪತ್ರಕರ್ತರಾಗಿದ್ದರು. ಟ್ರಿಬ್ಯೂನ್, ಹಿಂದೂಸ್ತಾನ್, ಲೀಡರ್, ಸುಧಾಕರ್, ಕೇಸರಿ, ಅಕ್ಬಾರ್-ಇ-ಆಮ್, ದಿ ಹಿಂದೂ ಮತ್ತು ಸ್ವದೇಶ್ ಮೊದಲಾದ ಸ್ಫೂರ್ತಿದಾಯಕ ಪತ್ರಿಕೆಗಳನ್ನು ಪ್ರಮುಖ ನಾಯಕರಾದ ತಿಲಕ್, ಗೋಖಲೆ, ಸುಬ್ರಮಣ್ಯ ಅಯ್ಯರ್, ಲಜ್‌ಪತ್‌ರಾಯ್, ಮದನ್ ಮೋಹನ ಮಾಳವೀಯ ಹಾಗೂ ಅಗರ್ಕರ್ ಸಂಪಾದಿಸುತ್ತಿದ್ದರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News