×
Ad

ಬಂದ್‌ಗೆ ಬೆಂಬಲ ವ್ಯಕ್ತಪಡಿಸದ ಚಿತ್ರೋದ್ಯಮ, ಕಾರ್ಮಿಕ ಸಂಘಟನೆಗಳು

Update: 2017-06-12 20:32 IST

ಬೆಂಗಳೂರು, ಜೂ.12: ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಹಾಗೂ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸೋಮವಾರ ಬೆಳಗ್ಗಿನಿಂದಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ನಾಟಕ ಬಂದ್‌ಗೆ ಪೂರಕವಾದ ಬೆಂಬಲ ವ್ಯಕ್ತವಾಗಿಲ್ಲ. ಬಿಎಂಟಿಸಿ, ಕೆಎರ್ಸ್ಸಾಟಿಸಿ ಸೇರಿದಂತೆ ವಾಹನ ಸಂಚಾರ ಹಾಗೂ ಜನಜೀವನ ಎಂದಿನಂತೆ ಇತ್ತು. ಅಂಗಡಿ, ಮುಗ್ಗಟ್ಟುಗಳು ತೆರೆದಿದ್ದವು. ಶಾಲಾ ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಶಾಲೆಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕನ್ನಡ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ನಿಂದ ಜನತೆಗೆ ಪ್ರಯೋಜನಕ್ಕಿಂತ ಸಮಸ್ಯೆಗಳಾಗುವುದೇ ಹೆಚ್ಚು ಎಂದು ಅಭಿಪ್ರಾಯಿಸಿ, ಹೊಟೇಲ್ ಮಾಲಕರು, ಆಟೋ ಚಾಲಕರ ಸಂಘ, ಚಿತ್ರೋದ್ಯಮದ ಮಾಲಕರು ಹಾಗೂ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಬೆಂಬಲ ವ್ಯಕ್ತಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ನಿರೀಕ್ಷಿಸಿದಂತೆ ಬಂದ್ ಯಶಸ್ವಿಯಾಗಲಿಲ್ಲ.

ಪೊಲೀಸ್ ಬಿಗಿ ಭದ್ರತೆ: ಬೆಂಗಳೂರು ಸೇರಿದಂತೆ ಶಾಶ್ವತ ನೀರಾವರಿಗೆ ಒಳಪಡುವ ಪ್ರದೇಶಗಳಾದ ಕೋಲಾರ, ಚಿಕ್ಕ ಬಳ್ಳಾಪುರ ಪ್ರದೇಶಗಳಲ್ಲಿ ಬಂದ್ ಯಶಸ್ವಿಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ಪೊಲೀಸ್ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು. ಆದರೂ ಮುಂಜಾಗ್ರತೆಯಾಗಿ ಚಿಕ್ಕಬಳ್ಳಾಪುರ, ಕೋಲಾರದಿಂದ ಬೆಂಗಳೂರಿಗೆ ಬರುವ ಕೆಎಸ್ಸಾರ್ಟಿಸಿ ಬಸ್ ಸಂಚಾರ ಮಧ್ಯಾಹ್ನದವರೆಗೆ ನಿಲ್ಲಿಸಲಾಗಿತ್ತು. ಕೆಲವು ಕಡೆ ಒತ್ತಾಯಪೂರ್ವಕವಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಪ್ರಯತ್ನಗಳು ನಡೆದವು.

ಮುಖಂಡರ ಬಂಧನ: ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ಮುಂಂಡರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರ್ಯಾಲಿಯಲ್ಲಿ ಕಾರ್ಪೊರೇಷನ್ ಬಳಿ ತೆರಳುತ್ತಿದ್ದಾಗ ಪೊಲೀಸರು ಬಂಧಿಸಿ ಆಡುಗೋಡಿಯಲ್ಲಿರುವ ಸಿಎಆರ್ ಮೈದಾನಕ್ಕೆ ಕರೆದೊಯ್ದರು. ವಾಟಾಳ್ ನಾಗರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದ್, ಕನ್ನಡ ಸೇನೆಯ ಅಧ್ಯಕ್ಷ ಕುಮಾರ್ ಬಂಧನಕೊಳಗಾದ ಪ್ರಮುಖ ಮುಖಂಡರು.

ಇನ್ನು ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹಾಗೂ ಕಾರ್ಯಕರ್ತರು ಮೇಕ್ರಿ ವೃತ್ತದ ಬಳಿ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಲು ಮುಂದಾದಾಗ ಪೊಲೀಸರು ಅವರನ್ನು ಬಂಧಿಸಿದರು. ಆ ಮೂಲಕ ಕರ್ನಾಟಕ ಬಂದ್‌ಗೆ ನೇತೃತ್ವ ವಹಿಸಿದ್ದ ಎಲ್ಲ ಮುಖಂಡರು ಬಂಧನಕ್ಕೊಳಗಾದರು. ಹೀಗಾಗಿ ಮಧ್ಯಾಹ್ನದ ಹೊತ್ತಿಗೆಲ್ಲಾ ಕರ್ನಾಟಕ ಬಂದ್ ಸಂಪೂರ್ಣ ಸ್ತಬ್ಧಗೊಂಡಿತು.

ಈ ವೇಳೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ರಾಜ್ಯದ ರೈತರ ಹಿತದೃಷ್ಟಿಯಿಂದ ಕರ್ನಾಟಕ ಬಂದ್ ಮಾಡಲಾಗಿತ್ತೇ ವಿನಹ ವ್ಯಯಕ್ತಿಕ ಉದ್ದೇಶದಿಂದಲ್ಲ. ರೈತರ ಹಿತವನ್ನು ಬಯಸುವವರೆಲ್ಲರೂ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕನ್ನಡ ಒಕ್ಕೂಟದಿಂದ ಕರೆ ನೀಡಿದ್ದ ಕರ್ನಾಟಕ ಬಂದ್ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಶಾಶ್ವತ ನೀರಾವರಿ ಜಾರಿಗಾಗಿ ಕರೆ ನೀಡಿದ್ದ ಕರ್ನಾಟಕ ಬಂದ್‌ನ್ನು ಕರ್ನಾಟಕ ಸರಕಾರವೇ ವಿಫಲಗೊಳಿಸಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಬೆಂಗಳೂರಿಗೆ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸುವ ಸಲುವಾಗಿ ನಮ್ಮನ್ನು ಬಂಧಿಸುವ ಮೂಲಕ ಬಂದ್‌ನ್ನು ವಿಫಲಗೊಳಿಸಿದ್ದಾರೆ.
-ವಾಟಾಳ್ ನಾಗರಾಜ್ ಅಧ್ಯಕ್ಷ ಕನ್ನಡ ಒಕ್ಕೂಟ

ಕನ್ನಡ ಒಕ್ಕೂಟವು ಪದೇ ಪದೇ ಕರ್ನಾಟಕ ಬಂದ್‌ಗೆ ಕರೆ ನೀಡುತ್ತಿದ್ದು, ಇದರಿಂದ ಪ್ರಯೋಜನಕ್ಕಿಂತ ಸಮಸ್ಯೆಗಳೇ ಹೆಚ್ಚಾಗಿದೆ. ಹೀಗಾಗಿ ಜನತೆ ಹಾಗೂ ಅನೇಕ ಸಂಘಟನೆಗಳ ಮುಖಂಡರ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಜನತೆಯ ವಿಶ್ವಾಸ ತೆಗೆದುಕೊಳ್ಳದೆ ಏಕಪಕ್ಷಿಯವಾಗಿ ಬಂದ್ ಕರೆ ನೀಡಿದರೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದಕ್ಕೆ ಈ ದಿನ ನಡೆದ ಸಾಕ್ಷಿಯಾಗಲಿದೆ.
-ನಾರಾಯಣ ಗೌಡ ಅಧ್ಯಕ್ಷ ಕನ್ನಡ ರಕ್ಷಣಾ ವೇದಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News