ಲೈಂಗಿಕ ದೌರ್ಜನ್ಯ ಕುರಿತ ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆ
ಬೆಂಗಳೂರು, ಜೂ. 12: ಲೈಂಗಿಕ ದೌರ್ಜನ್ಯಗಳ ತಡೆಗಟ್ಟುವ ಸಲುವಾಗಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತ ಚಿತ್ರಕಲೆ, ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳನ್ನು ಜನದನಿ ಸಂಸ್ಥೆ ವತಿಯಿಂದ ಜೂ.17 ರಂದು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕಿ ಜಯಲಕ್ಷ್ಮಿ ಪಾಟೀಲ್, ಮಕ್ಕಳಲ್ಲಿ ಹಂತ ಹಂತವಾಗಿ ಲೈಂಗಿಕತೆ ಕುರಿತು ಅರಿವು ಮೂಡಿಸುವ ಮೂಲಕ ಮಕ್ಕಳನ್ನು ಚಿಂತನೆಗೆ ಹಚ್ಚುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಲೈಂಗಿಕ ದೌರ್ಜನ್ಯ ತಡೆಗಟ್ಟಲು ನಾವೇನು ಮಾಡಬಹುದು ಎಂದು ವಿದ್ಯಾರ್ಥಿಗಳಲ್ಲಿ ಯೋಚನೆ ಮಾಡುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಆಧುನೀಕರಣ ಪ್ರಭಾವದಿಂದಾಗಿ ಪ್ರತಿಯೊಬ್ಬರ ಮನೆಯಲ್ಲಿ ಟಿವಿ ಮಾಧ್ಯಮ ವ್ಯಾಪಕವಾದ ಪರಿಣಾಮ ಮಕ್ಕಳ ಮೇಲೆ ಬೀರುತ್ತಿದೆ. ಹಿಂದಿನ ದಿನಗಳಲ್ಲಿ ಅತ್ಯಾಚಾರದ ಸುದ್ದಿ ನೋಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಯಾವುದೇ ಅಂಜಿಕೆಯಿಲ್ಲದೆ ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಲಾ-ಕಾಲೇಜು ಮಕ್ಕಳ ನಡುವೆ ಯಾವುದು ಸರಿ ಮತ್ತು ತಪ್ಪು ಎಂದು ಅರಿವು ಮೂಡಿಸಲಾಗುತ್ತದೆ. ಇದರಿಂದ ಮಕ್ಕಳು ಲಿಂಗಭೇದವಿಲ್ಲದೆ ಪರಸ್ಪರ ಗೌರವಿಸುವಂತಾಗಲು ಮತ್ತು ಮುಂದಿನ ನಾಗರಿಕರಾಗಿ ರೂಪುಗೊಳ್ಳಲು ಆರೋಗ್ಯಕರವಾಗಿ ಆಲೋಚಿಸುವಂತೆ ಮಾಡುವುದು ಈ ಸ್ಪರ್ಧೆಯ ಉದ್ದೇಶವಾಗಿದೆ. ಇದರಲ್ಲಿ 400 ಕ್ಕೂ ಅಧಿಕ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ ಬಹುಮಾನ ವಿತರಣೆ ನಡೆಯಲಿದೆ.
ಸಮಾರಂಭದಲ್ಲಿ ನಿವೃತ್ತ ಎಸಿಪಿ ಅಶೋಕ್‌ಕುಮಾರ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವಾ, ಚಿತ್ರ ನಿರ್ದೇಶಕ ಯೋಗರಾಜ್‌ಭಟ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.