ಕೌಟುಂಬಿಕ ಕಾನೂನು ಪರಿಶೀಲನೆಗೆ ಆಗ್ರಹ
ಬೆಂಗಳೂರು, ಜೂ. 12: ರಾಷ್ಟ್ರೀಯ ತಂದೆಯಂದಿರ ದಿನದ ಅಂಗವಾಗಿ ಜೂ. 17 ರಂದು ಕೌಟುಂಬಿಕ ಕಾನೂನು ಪರಿಶೀಲನೆಗೆ ಒತ್ತಾಯಿಸಿ ನಗರದ ಪುರಭವನದ ಎದುರು ಕ್ರಿಸ್ಪ್ ಸಂಸ್ಥೆ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಯೋಗೇಶ್ ಮಾಸ್ಟರ್ ಮಾತನಾಡಿ, ಮಕ್ಕಳಿಗೆ ತಂದೆ-ತಾಯಿ ಇಬ್ಬರ ಪ್ರೀತಿಯ ಪಾಲು ಮಕ್ಕಳಿಗೆ ಅತಿಮುಖ್ಯವಾಗುತ್ತದೆ. ತಂದೆ-ತಾಯಿ ಇಬ್ಬರ ಪ್ರೀತಿಯನ್ನು ಪಡೆಯುವುದರಿಂದ ಹಲವಾರು ಮಕ್ಕಳು ವಂಚಿತರಾಗುತ್ತಿದ್ದಾರೆ. ಕುಟುಂಬದಲ್ಲಿ ಎದುರಾಗುವ ಸಣ್ಣ ಸಣ್ಣ ಒಡಕುಗಳು ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿವೆ ಎಂದರು.
ಸಂಸ್ಥೆಯ ಅಧ್ಯಕ್ಷ ಕುಮಾರ್ ಜಹಗಿರ್‌ದಾರ್ ಮಾತನಾಡಿ, ತಂದೆ-ತಾಯಿಯ ಪ್ರೀತಿ ಅನುಭವಿಸುವುದು ಮಗುವಿನ ಮೂಲಭೂತ ಹಕ್ಕು. ಆದರೆ, ವರ್ಷದಿಂದ ವರ್ಷಕ್ಕೆ ವಿಚ್ಛೇಧನ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ ಮಾತ್ರ 2 ಸಾವಿರ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿವೆ ಎಂದು ಹೇಳಿದರು.
ಮಕ್ಕಳ ಸುಪರ್ದಿನ ದಾವೆಗಳಲ್ಲಿ ಪ್ರತೀಕಾರದ ಮೇಲೆ ಪೋಷಕರು ತಮಗೆ ಬೇಕಾದಂತೆ ಕಾನೂನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಕ್ಕಳ ಮೇಲೆ ತೀವ್ರ ತರದ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪೋಷಕರು ತಮ್ಮ ನಡುವಿನ ಜಗಳದಲ್ಲಿ ಮಕ್ಕಳ ಮನಸ್ಸಿನಲ್ಲಿ ಅಪಾಯಕಾರಿ ಭಾವನೆ ಮೂಡಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.
ಹೆಂಡತಿಯರು ಗಂಡನಿಂದ ಮಾಶಾಸನ ಪಡೆಯಲು ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಂದೆಯರು ತಮ್ಮ ಮಕ್ಕಳನ್ನು ಅಪ್ಪಿ ತಪ್ಪಿ ಭೇಟಿ ಮಾಡಿದರೆ ಸುಳ್ಳು ಆರೋಪ ಹೊರಿಸಿ ಕೇಸ್ ದಾಖಲಿಸುತ್ತಿದ್ದಾರೆ. ಪೋಷಕರ ಇಂತಹ ಕ್ರಮಗಳಿಂದ ಬೇಸತ್ತು ಶೇ. 5 ರಷ್ಟು ಮಕ್ಕಳು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಶೇ. 9 ರಷ್ಟು ಮಕ್ಕಳು ಪ್ರೌಢಶಿಕ್ಷಣಕ್ಕೆ ಓದುವುದು ನಿಲ್ಲಿಸುತ್ತಿದ್ದಾರೆ. ಶೇ. 14 ರಷ್ಟು ಮಕ್ಕಳು ಅತ್ಯಾಚಾರಿಗಳಾಗುತ್ತಿದ್ದರೆ, ಶೇ. 32 ರಷ್ಟು ಮಕ್ಕಳು ಮನೆ ಬಿಟ್ಟು ಹೋಗುತ್ತಿರುವ ಪ್ರಕರಣಗಳು ವರದಿಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾನೂನು ಇಲಾಖೆಯ ಮೇ 2015ರ ವರದಿಯಂತೆ ತಂದೆ-ತಾಯಿ ಇಬ್ಬರಿಗೂ ಸಮಾನ ಪೋಷಣೆಯ ಹಕ್ಕು ನೀಡಬೇಕು. ತಂದೆಯಂದಿರನ್ನು ಮಕ್ಕಳಿಂದ ಮತ್ತು ಕುಟುಂಬದಿಂದ ದೂರ ಮಾಡುವ ಉದ್ದೇಶದಿಂದ ವರದಕ್ಷಿಣೆ, ಹಿಂಸೆ ಮತ್ತು ಅತ್ಯಾಚಾರದ ಆರೋಪ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ವಿಚ್ಛೇಧನ ಪಡೆದ ದಂಪತಿಗಳ ವಿಷಯದಲ್ಲಿ ಮಕ್ಕಳನ್ನು ಓರ್ವ ಪೋಷಕನಿಂದ ದೂರ ಮಾಡುವುದನ್ನು ಕಾನೂನು ಬಾಹಿರಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.