ಮಹಾರಾಷ್ಟ್ರ: ಕೃಷಿ ಸಾಲಮನ್ನಾ ಯೋಜನೆ ಜಾರಿಗೆ ಮುನ್ನ ಮಾನದಂಡ ರೂಪಿಸಲು ನಿರ್ಧಾರ

Update: 2017-06-12 16:14 GMT

ಮುಂಬೈ, ಜೂ.12: ರೈತರ ಕೃಷಿ ಸಾಲಮನ್ನಾ ಘೋಷಿಸಿರುವ ಮಹಾರಾಷ್ಟ್ರ ಸರಕಾರ, ಇದೀಗ ವಾಸ್ತವಿಕ ರೈತರು ಮಾತ್ರ ಈ ಯೋಜನೆಯ ಲಾಭ ಪಡೆಯುವ ನಿಟ್ಟಿನಲ್ಲಿ ಮಾನದಂಡವೊಂದನ್ನು ರೂಪಿಸಲು ನಿರ್ಧರಿಸಿದೆ.

ಮಹಾರಾಷ್ಟ್ರವು ಒಂದು ದೊಡ್ಡ ರಾಜ್ಯವಾಗಿದ್ದು ಇಲ್ಲಿರುವ 1.36 ಕೋಟಿ ರೈತರ ಕೃಷಿ ಸಾಲ ಮನ್ನಾ ಮಾಡಲು ಸರಕಾರಕ್ಕೆ 1.14 ಲಕ್ಷ ಕೋಟಿ ರೂ. ಅಗತ್ಯವಿದೆ.

 ರಾಜ್ಯದಲ್ಲಿರುವ ಒಟ್ಟು 1.36 ಕೋಟಿ ರೈತರಲ್ಲಿ ಕೃಷಿ ಭೂಮಿ ಹೊಂದಿರುವ ರಾಜಕಾರಣಿಗಳು, ಜನಪ್ರತಿನಿಧಿಗಳು, ವೈದ್ಯರು, ಇಂಜಿನಿಯರ್‌ಗಳು, ಉದ್ಯಮಿಗಳೂ ಸೇರಿದ್ದಾರೆ. ಈ ವರ್ಗಕ್ಕೆ ಸೇರಿದ ರೈತರು ಸಾಲಮನ್ನಾ ಯೋಜನೆಯ ಲಾಭ ಪಡೆಯಬಾರದು ಎಂದು ಇತ್ತೀಚೆಗೆ ನಡೆದ ಸಚಿವ ಮಟ್ಟದ ಸಮಿತಿ ಸಭೆಯಲ್ಲಿ ಸಮಿತಿಯ ಸದಸ್ಯರು ಅಭಿಪ್ರಾಯ ಪಟ್ಟಿದ್ದರು.

 2016-17ರಲ್ಲಿ ರಾಜ್ಯದಲ್ಲಿ 52 ಲಕ್ಷ ರೈತರಿಗೆ 51,235 ಕೋಟಿ ರೂ. ಮೊತ್ತದ ಕೃಷಿಸಾಲ ಮಂಜೂರಾಗಿದೆ. ಇದರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ 26,470 ಕೋಟಿ ರೂ, ಖಾಸಗಿ ಬ್ಯಾಂಕ್‌ಗಳ ಮೂಲಕ 4,126 ಕೋಟಿ ರೂ, ಗ್ರಾಮೀಣ ಬ್ಯಾಂಕ್‌ಗಳ ಮೂಲಕ 3,044 ಕೋಟಿ ರೂ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಮೂಲಕ 17,548 ಕೋಟಿ ರೂ. ಮತ್ತು ಇತರ ಮೂಲಗಳಿಂದ 44 ಕೋಟಿ ರೂ. ವಿತರಿಸಲಾಗಿದೆ. 2014ಕ್ಕೆ ಹೋಲಿಸಿದರೆ 2016ರಲ್ಲಿ 7.66 ಲಕ್ಷ ಹೆಚ್ಚುವರಿ ರೈತರು ಕೃಷಿಸಾಲ ಪಡೆದಿದ್ದು ಹೆಚ್ಚುವರಿಯಾಗಿ 7,942 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಸರಕಾರದ ಅಂಕಿ ಅಂಶಗಳು ತಿಳಿಸಿವೆ.

 2017-18ರಲ್ಲಿ ಮಹಾರಾಷ್ಟ್ರ ರಾಜ್ಯದ ಬಜೆಟ್ 2.57 ಲಕ್ಷ ಕೋಟಿ ರೂ. ಆಗಿದ್ದು ಇದರಲ್ಲಿ 1.77 ಕೋಟಿ ರೂ. ಅವಶ್ಯಕ ಬಾಧ್ಯತೆಗಳಿಗೆ ಮೀಸಲಾಗಿದ್ದು ಈ ಮೊತ್ತವನ್ನು ಇತರ ಉದ್ದೇಶಗಳಿಗೆ ಬಳಸುವಂತಿಲ್ಲ. ಹೀಗಾಗಿ ರಾಜ್ಯದ ಬಳಿ ಉಳಿದಿರುವ ಮೊತ್ತ ಕೇವಲ 0.80 ಲಕ್ಷ ಕೋಟಿ ರೂಪಾಯಿ ಮಾತ್ರ.

ಆದರೂ ಕಳವಳ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ರಾಜ್ಯದ ವಿತ್ತ ಸಚಿವ ಸುಧೀರ್ ಮುನ್‌ಗಂಟೀವರ್. ರೈತರಿಗೆ ಸಂಬಂಧಿಸಿದ ವಿಷಯವಾದ ಕಾರಣ ಸಾಲ ಪಡೆಯುವ ಬಗ್ಗೆ ನಾವೇಕೆ ಯೋಚಿಸಬಾರದು ಎಂದು ಪ್ರಶ್ನಿಸಿರುವ ಅವರು, 7ನೇ ವೇತನ ಆಯೋಗ ದ ಶಿಫಾರಸನ್ನು ಜಾರಿಗೊಳಿಸುವಾಗ ಅಥವಾ ಕೈಗಾರಿಕೆಗಳಿಗೆ ರಿಯಾಯಿತಿ ಘೋಷಿಸುವಾಗ ಯಾವುದೇ ಪ್ರಶ್ನೆಯನ್ನು ಎತ್ತಲಾಗುವುದಿಲ್ಲ ಯಾಕೆ ಎಂದವರು ಪ್ರಶ್ನಿಸಿ ದ್ದಾರೆ.

ಸಾಲಮನ್ನಾ ಮಾಡಲು ಅಗತ್ಯವಿರುವ ಮೊತ್ತದ ಬಗ್ಗೆ ಇನ್ನೂ ಲೆಕ್ಕಾಚಾರ ಹಾಕಲಾಗಿಲ್ಲ. ಮಹಾರಾಷ್ಟ್ರ ಒಂದು ದೊಡ್ಡ ರಾಜ್ಯವಾಗಿರುವ ಕಾರಣ ಇಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳಲು ಸಾಕಷ್ಟು ಮೂಲಗಳಿವೆ ಎಂದವರು ಹೇಳಿದ್ದಾರೆ.

    ರಾಜ್ಯದಲ್ಲಿರುವ 31 ಲಕ್ಷಕ್ಕೂ ಅಧಿಕ ಸಣ್ಣ ಮತ್ತು ಬಡ ರೈತರ ಸಾಲ ಮನ್ನಾ ಮಾಡುವುದಾದರೆ ಸುಮಾರು 30,000 ಕೋಟಿ ರೂ.ಗಳ ಅಗತ್ಯವಿದೆ. ಹೆಚ್ಚೆಂದರೆ 35,000 ಕೋಟಿ ರೂ. ಅಗತ್ಯಬೀಳಬಹುದು. ಆದ್ದರಿಂದ ವಾಸ್ತವಿಕ ರೈತರು(ಬೆಳೆನಷ್ಟದಿಂದ ತತ್ತರಿಸಿದ ರೈತರು)ಮಾತ್ರ ಯೋಜನೆಯ ಪ್ರಯೋಜನ ಪಡೆಯುವಂತಾಗಲು ಕೆಲವು ಮಾನದಂಡಗಳನ್ನು ಅಳವಡಿಸಿಕೊಳ್ಳಲು ಸರಕಾರ ಮುಂದಾಗಿದೆ. ಕೃಷಿ ಹೊರತಾಗಿ ಪರ್ಯಾಯ ಆದಾಯ ಮೂಲ ಇರುವ ರೈತರಿಗೆ ಸಾಲಮನ್ನಾ ಅನ್ವಯಿಸದು ಎಂದು ಸರಕಾರದ ಮೂಲಗಳು ತಿಳಿಸಿವೆ. ರಾಜಕೀಯ ಧುರೀಣರ ಅಧೀನದಲ್ಲಿರುವ ಸಹಕಾರಿ ಬ್ಯಾಂಕ್ ಮತ್ತು ಸಹಕಾರಿ ಸೊಸೈಟಿಗಳು ಸಾಲಮನ್ನಾ ಯೋಜನೆಯ ಲಾಭ ಪಡೆಯುವಂತಾಗಬಾರದು ಎಂದು ಇತ್ತೀಚೆಗೆ ನಡೆದ ಸಚಿವ ಮಟ್ಟದ ಸಮಿತಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News