ಭಾರತದ ಹೈನುಗಾರಿಕೆ ಅರ್ಥವ್ಯವಸ್ಥೆಯನ್ನು ಕೊಲ್ಲುತ್ತಿರುವ ಮೋದಿ ಸರಕಾರ

Update: 2017-06-12 18:43 GMT

ಮಾರುಕಟ್ಟೆಯಿಂದ, ಊರಿನ ಸಂತೆಯಿಂದ ಹತೈಮಾಡಲು ಪ್ರಾಣಿಗಳನ್ನು ಕೊಂಡುಕೊಳ್ಳದಂತೆ ಸರಕಾರ ನಿಷೇಧ ಹೇರಿದ ಬಳಿಕ ಎಮ್ಮೆ ಮಾಂಸದ ರಫ್ತಿನಿಂದ ಬರುತ್ತಿದ್ದ ಆದಾಯ ನಷ್ಟದ ಮಾತು ಹಾಗಿರಲಿ; ನಿಷೇಧದಿಂದ ನಿಜವಾದ ಪರಿಣಾಮವಾಗುವುದು ಮೂರು ಲಕ್ಷಕೋಟಿ ರೂಪಾಯಿಗಿಂತಲೂ ಹೆಚ್ಚು ಬೆಲೆಬಾಳುವ ಹೈನುಗಾರಿಕೆ ಅರ್ಥವ್ಯವಸ್ಥೆಯ ಮೇಲೆ ಹಾಗೂ ಅತ್ಯಂತ ಬಡ ದೇಶದ ರೈತರ ಮೇಲೆ.

ಗೋಹತ್ಯೆ ನಿಷೇಧ ಕುರಿತಾದ ಚರ್ಚೆ ದೇಶದ ಫೆಡರಲ್ ವ್ಯವಸ್ಥೆ ಹಾಗೂ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿ ನಡೆಯುತ್ತಿದೆ. ಆದರೆ ಅನಿಶ್ಚಿತ ಮಳೆ ಹಾಗೂ ಎಂದಿನ ಮಾಮೂಲಿ ಬೆಳೆಗಳಿಂದ ಬರುತ್ತಿದ್ದ ಆದಾಯ ಕುಸಿತವಾಗುತ್ತಾ ಸಾಗಿದಂತೆ ದೇಶದ ಸಣ್ಣ ಹಾಗೂ ಮಧ್ಯಮ (ಮಾರ್ಜಿನಲ್) ರೈತರು ಯಾವ ಅರ್ಥ ವ್ಯವಸ್ಥೆಯನ್ನು ಅಳವಡಿಸಿಕೊಂಡರೋ ಆ ಅರ್ಥವ್ಯವಸ್ಥೆಯನ್ನು ಹತ್ಯೆಗೈಯಲು ಗೋಹತ್ಯೆ ನಿಷೇಧ ಸರ್ವ ಸನ್ನದ್ಧವಾಗಿ ನಿಂತಿದೆ.

ಕೇವಲ ಒಂದು ದಶಕದಲ್ಲಿ ದೇಶದ ಕೃಷಿ ರಂಗದಲ್ಲಿ ಐತಿಹಾಸಿಕ ಬದಲಾವಣೆಯಾಗಿದೆ. ಇಂದು ದೇಶಕ್ಕೆ ಜಾನುವಾರುಗಳ ಆರ್ಥಿಕ ಕೊಡುಗೆ ಆಹಾರಧಾನ್ಯ ಬೆಳೆಗಳ ಕೊಡುಗೆಗಿಂತ ಜಾಸ್ತಿ ಇದೆ. ಸಾಂಪ್ರದಾಯಿಕವಾಗಿ, ಕೃಷಿ ರಂಗದ ಮೂರು ಮುಖ್ಯ ಘಟಕಗಳಾದ ಬೆಳೆಗಳು, ಜಾನುವಾರು ಮತ್ತು ಮೀನುಗಾರಿಕೆಯಲ್ಲಿ ಬೆಳೆಗಳೇ ಆರ್ಥಿಕ ಬೆಳವಣಿಗೆಯ ಮುಂಚೂಣಿಯಲ್ಲಿದ್ದವು ಮತ್ತು ಆಹಾರ ಧಾನ್ಯಗಳು ಈ ಬೆಳವಣಿಗೆಯ ಒಂದು ಬಹು ಮುಖ್ಯ ಭಾಗ. ಪರಿಣಾಮವಾಗಿ, ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಬೆಳೆಗಳ ಮೇಲೆ ಮುಖ್ಯ ಗಮನ ಹರಿಸಿದ್ದವು.

ದೇಶದಲ್ಲಿ ಬದಲಾಗುತ್ತಿರುವ ಗ್ರಾಮೀಣ ಅರ್ಥವ್ಯವಸ್ಥೆಯ ಕುರಿತಾದ ಜ್ಞಾನದ ಕೊರತೆಯ ಪರಿಣಾಮವಾಗಿ ಗೋಹತ್ಯೆ ನಿಷೇಧದ ಬಳಿಕ ನಡೆಯುತ್ತಿರುವ ಚರ್ಚೆ ತಪ್ಪು ವಿಷಯಗಳ ಬಗ್ಗೆ ನಡೆಯುತ್ತಿದೆ; ಚರ್ಚೆ ತಪ್ಪು ಹಾದಿಯಲ್ಲಿ ಸಾಗುತ್ತಿದೆ. ಮಾಧ್ಯಮಗಳು ನಿಷೇಧದಿಂದ ಆಗುವ ರಫ್ತು ಆದಾಯ ನಷ್ಟದ ಮೇಲೆ ತಮ್ಮ ಗಮನವನ್ನು ನೆಟ್ಟಿವೆ, ಆದರೆ ಈಗ ಏಕಪಕ್ಷೀಯವಾಗಿ ಕೃಷಿ ಬೆಳವಣಿಗೆಯನ್ನು ನಿರ್ಧರಿಸುವ ಸ್ಥಳೀಯ ಹೈನುಗಾರಿಕೆ ಅರ್ಥವ್ಯವಸ್ಥೆಯ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ.

ಬೆಳೆಗಳ ಬದಲು ಹೈನುಗಾರಿಕೆ ಅರ್ಥ ವ್ಯವಸ್ಥೆಯ ಕಡೆಗೆ ಹೊರಳಲು ರೈತರು ತಾವಾಗಿಯೇ ನಿರ್ಧಾರ ತೆಗೆದುಕೊಂಡ ಬಳಿಕ ಹೈನುಗಾರಿಕೆ ಅಥರ್ವ್ಯವಸ್ಥೆ ಉಜ್ವಲವಾಗ ತೊಡಗಿ ಒಂದು ದಶಕಕ್ಕೂ ಹೆಚ್ಚು ಸಮಯ ಕಳೆದಿದೆ. 2002-03ರಲ್ಲಿ ಆಹಾರ ಧಾನ್ಯಗಳ ಕೊಡುಗೆಗಿಂತ ಜಾನುವಾರುಗಳ ಕೊಡುಗೆ ಹೆಚ್ಚಾದಾಗ ಬರಗಾಲದ ವೇಳೆ ಬಚಾವಾಗಲು ಬಡವರು ತಾತ್ಕಾಲಿಕವಾಗಿ ಜಾನುವಾರು ಸಾಕಣೆ ಕಡೆಗೆ ಹೊರಳಿದ್ದಾರೆ ಎಂದು ನೀತಿ ನಿರೂಪಕರು ಅದನ್ನು ಕಡೆಗಣಿಸಿದರು. ಅದರೆ ನ್ಯಾಶನಲ್ ಸೆಂಟರ್ ಫಾರ್ ಆಗ್ರಿಕಲ್ಚರಲ್ ಇಕನಾಮಿಕ್ಸ್‌ನ ಅರ್ಥಶಾಸ್ತ್ರಜ್ಞರ ಪ್ರಕಾರ ಅಂದಿನಿಂದ ಹೈನುಗಾರಿಕೆ ಕೊಡುಗೆ ಶೇ.5-13ರಷ್ಟು ಹೆಚ್ಚುತ್ತಲೇ ಇದೆ. ನಿಜವಾಗಿ ಒಂದು ದಶಕದಿಂದ ಬೆಳೆಗಳಿಗಿಂತ ಹೈನುಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳು ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿವೆ.

ಜಾನುವಾರುಗಳು ಕೃಷಿ ಬೆಳವಣಿಗೆಯ ಯಂತ್ರವೆಂದು ಗುರುತಿಸುವ ಮೂಲಕ (2017ರಲ್ಲಿ ಕೊನೆಗೊಂಡು) ಪಂಚವಾರ್ಷಿಕ ಯೋಜನೆಗಾಗಿ ತಯಾರಿಸಿದ ವರದಿಯೊಂದು ಈ ಬದಲಾವಣೆಯನ್ನು ಒಪ್ಪಿಕೊಂಡಿದೆ. ಒಟ್ಟು ರಾಷ್ಟ್ರೀಯ ದೇಶಿ ಕೃಷಿ ಉತ್ಪನ್ನದ ಶೇ. 25ರಷ್ಟು ಹೈನುಗಾರಿಕೆ ನಿಯಂತ್ರಿಸುತ್ತದೆ. 2010-11ರಲ್ಲಿ (ಇಂದಿನ ದರದಲ್ಲಿ) ಅದು 3,40,500 ಕೋಟಿ ರೂಪಾಯಿಗಳಷ್ಟು ಪ್ರತಿಫಲವನ್ನು ಉತ್ಪಾದಿಸಿತು. ಇದು ಒಟ್ಟು ಕೃಷಿ ಉತ್ಪನ್ನದ ಶೇ. 28 ಮತ್ತು ದೇಶದ ಒಟ್ಟು ಉತ್ಪನ್ನದ ಶೇ. 5ರಷ್ಟು ಅಗಿದೆ.

ಜಾನುವಾರುಗಳ ಬಳಿಕ ಕೃಷಿ ಉತ್ಪನ್ನಕ್ಕೆ ಅತೀ ಹೆಚ್ಚು ಕೊಡುಗೆ ಬರುವುದು ಭತ್ತದ ಬೆಳೆಯಿಂದ. ಸೆಂಟ್ರಲ್ ಸ್ಟೆಟಿಸ್ಟಿಕಲ್ ಆಫೀಸ್‌ನ ಪ್ರಕಾರ 2009-10ರಲ್ಲಿ ಜಾನುವಾರುಗಳ ಉತ್ಪನ್ನ ಭತ್ತದ ವೌಲ್ಯದ ಎರಡೂವರೆ ಪಟ್ಟು ಆಗಿತ್ತು.

ರೈತರಿಗೆ ಜಾನುವಾರುಗಳ ಉಪಯೊಗ ಮತ್ತು ಅವರ ಅಹಾರ ಕ್ರಮದ ಮಾದರಿಯಲ್ಲಿ ಆಗಿರುವ ಬದಲಾವಣೆಗಳು ಹೈನುಗಾರಿಕೆ ರಂಗದ ಬೆಳವಣಿಗೆಗೆ ಕಾರಣಗಳಾಗಿವೆ. ಕೃಷಿ ಕಾರ್ಯಾಚರಣೆಗಳ ಯಾಂತ್ರೀಕರಣ ಮತ್ತು ಗಾತ್ರದಲ್ಲಿ ಚಿಕ್ಕದಾಗುತ್ತಿರುವ ಜಮೀನುಗಳು ‘ಬರಗಾಲದ ಶಕ್ತಿ’ಯಾಗಿ ಜಾನುವಾರುಗಳಿಗಿದ್ದ ಮಹತ್ವ ಕಡಿಮೆಯಾಗಲು ಕಾರಣವಾಗಿದೆ. ರಾಸಾಯನಿಕ ಗೊಬ್ಬರಗಳು ಸೆಗಣಿಗೆ ಬದಲಾಗಿ ಬಳಕೆಯಾಗುತ್ತಿವೆ. ಅದೇ ವೇಳೆ ಮೊಟ್ಟೆ, ಹಾಲು, ಮಾಂಸದಂತಹ ಹೈನು ಉತ್ಪನ್ನಗಳ ಸೇವನೆ, ಹೆಚ್ಚುತ್ತಿರುವ ಮಧ್ಯಮ ವರ್ಗದ ಆದಾಯದಿಂದಾಗಿ, ನಗರ ಹಾಗೂ ಗ್ರಾಮೀಣ ಪ್ರದೇಶ ಎರಡರಲ್ಲೂ ಹೆಚ್ಚುತ್ತಿದೆ.

ಗೋಮಾಂಸ ನೀತಿ ಮತ್ತು ಮಾಂಸಾಹಾರದ ಸೇವನೆಯ ಬಗ್ಗೆ ಹೆಚ್ಚುತ್ತಿರುವ ಅಸಹನೆಯ ಕುರಿತಾದ ಈ ಅವಿರತ ಗೊಂದಲದಿಂದಾಗಿ ಬಡವರ ಹೊಸ ಅರ್ಥ ವ್ಯವಸ್ಥೆ ಕುಸಿಯುವ ಅಪಾಯದಲ್ಲಿದೆ ಎನ್ನುತ್ತಾರೆ ಕೆಲವು ಅರ್ಥಶಾಸ್ತ್ರಜ್ಞರು. ಉದಾಹರಣೆಗೆ, ಸರಕಾರದ ಹೊಸ ನಿಯಮದಂತೆ ಸಂತೆಗಳಲ್ಲಿ ಜಾನುವಾರು ವ್ಯಾಪಾರ ಮಾಡುವಂತಿಲ್ಲ. ಆದರೆ ಹೆಚ್ಚಿನ ಜಾನುವಾರುಗಳು ಮಾರಾಟವಾಗುವುದೇ ಪ್ರತಿವಾರ ನಡೆಯುವ ಸ್ಥಳೀಯ ಸಂತೆಗಳಲ್ಲಿ. ಇವುಗಳ ಹೊರತಾಗಿ ರೈತರು ನಿರ್ದಿಷ್ಟ ಮಾರುಕಟ್ಟೆಗಳಿಗೆ ಹೋಗಬೇಕೆಂದಾದಲ್ಲಿ ಅವರು ಸಾರಿಗೆ, ಸಾಗಣೆಗಾಗಿ ಬಹಳಷ್ಟು ಹಣ ವ್ಯಯಿಸಬೇಕಾಗಿತ್ತದೆ.

ಜನರಿಗೆ ನೌಕರಿ ನೀಡುವುದರಲ್ಲಿ ಮತ್ತು ಆದಾಯ ತರುವ ಅವಕಾಶಗಳಲ್ಲಿ ಜಾನುವಾರುಗಳು ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ಬೇಸಾಯವು ಗರಿಷ್ಠ ಜನರಿಗೆ ಇನ್ನೂ ಉದ್ಯೋಗ ನೀಡುತ್ತಿದೆಯಾದರೂ, ಹೈನುಗಾರಿಕೆ ರಂಗದಲ್ಲಿ ನೌಕರಿ ಅವಕಾಶ ಕೂಡ ವೇಗವಾಗಿ ಹೆಚ್ಚುತ್ತಿದೆ.

ಬಡತನಕ್ಕೂ ಹೈನುಗಾರಿಕೆ ರಂಗದ ಬೆಳವಣಿಗೆಗೂ ನಿಕಟ ಸಂಬಂಧ:

ಬೇಸಾಯದ ಆದಾಯಕ್ಕೆ ಜಾನುವಾರು ಗಳ ಕೊಡುಗೆ ಎಲ್ಲಿ ಹೆಚ್ಚು ಇದೆಯೋ ಅಂತಹ ರಾಜ್ಯಗಳಲ್ಲಿ (ಪಂಜಾಬ್, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಕೇರಳ, ಗುಜರಾತ್ ಮತ್ತು ರಾಜಸ್ಥಾನ) ಗ್ರಾಮೀಣ ಬಡತನ ಕಡಿಮೆ ಇದೆ.ಹೆಚ್ಚಾಗಿ ಮಧ್ಯಮ ಪ್ರಮಾಣದ ರೈತರು ಮತ್ತು ಬೇಸಾಯವನ್ನು ಬಿಟ್ಟವರು ಹೈನುಗಾರಿಕೆ ವ್ಯವಹಾರಕ್ಕೆ ಇಳಿಯುತ್ತಿದ್ದಾರೆ. ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಹಾಗೂ ಜಮೀನು ರಹಿತ ಶೇ. 67 ಮಂದಿ ದೇಶದ ಹೈನುಗಾರಿಕೆ ಮಾರುಕಟ್ಟೆಯ ಶೇ.70ರಷ್ಟು ಮಾಲಕತ್ವ ಹೊಂದಿದ್ದಾರೆ.

ಅಂದರೆ, ಬೇಸಾಯರಂಗದ ಬೆಳವಣಿಗೆಗಿಂತ ಹೈನುಗಾರಿಕೆ ರಂಗದ ಬೆಳವಣಿಗೆ ಬಡತನ ಕಡಿಮೆ ಮಾಡುವುದರಲ್ಲಿ ಹೆಚ್ಚು ಪ್ರಭಾವ ಬೀರುತ್ತದೆ. ಆದರೆ ಇದು ಹೈನುಗಾರಿಕೆ ರಂಗದ ಪೂರ್ಣ ಸಾಮರ್ಥ್ಯವಲ್ಲ ಅದು ಇನ್ನೂ ಹೆಚ್ಚು ಇದೆ. ಅತ್ಯಂತ ಬಡವರಿಗೆ ಬದುಕು ನೀಡುವ ಈ ರಂಗ ವನ್ನು ಸರಕಾರದ ಯೋಜನೆಯ ಕೊರತೆ ಉಸಿರುಗಟ್ಟಿಸುತ್ತದೆ. ಭಾರತದ ಹೈನುಗಾರಿಕೆ ಉತ್ಪಾದಕತೆ ಜಾಗತಿಕ ಉತ್ಪಾದಕತೆಯ ಶೇ. 20-60ರಷ್ಟು ಕಡಿಮೆ ಇದೆ.

ಪಶು ಆಹಾರ ಮತ್ತು ಹುಲ್ಲಿನ ಕೊರತೆ, ತಳಿಗಳ ಅಸಮರ್ಪಕ ಅಭಿವೃದ್ಧಿ ಮತ್ತು ಪಶುಗಳಲ್ಲಿ ಹೆಚ್ಚುತ್ತಿರುವ ಕಾಯಿಲೆಗಳು ಉತ್ಪಾದನೆಯಾಗಬೇಕಾದ ಒಟ್ಟು ಉತ್ಪಾದಕತೆಯ ಶೇ. 50 ಕಡಿತಕ್ಕೆ ಕಾರಣವಾಗಿದೆ. ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಹೈನುಗಾರಿಕೆಗೆ ಹೆಚ್ಚಿನ ಬಾಧೆ ಉಂಟು ಮಾಡಲಾರವಾದ್ದರಿಂದ, ಮಳೆ ಅವಲಂಬಿತ ಕೃಷಿಗಿಂತ ಹೈನುಗಾರಿಕೆ ಹೆಚ್ಚು ವಿಶ್ವಾಸಾರ್ಹವೆಂದು ಪರಿಗಣಿಸಬಹುದಾಗಿದೆ. ಆದರೆ ಕೃಷಿ ರಂಗಕ್ಕೆ ದೊರಕುವ ಒಟ್ಟು ಸಾರ್ವಜನಿಕ/ಸರಕಾರಿ ವೆಚ್ಚದ ಶೇ. 12ರಷ್ಟು ಮಾತ್ರ ಮತ್ತು ಒಟ್ಟು ಸಾಂಸ್ಥಿಕ ಹಣಕಾಸು ನೆರವಿನ ಶೇ. 4-5 ಮಾತ್ರ ಹೈನುಗಾರಿಕೆಗೆ ದೊರಕುತ್ತಿದೆ. ಒಟ್ಟು ಜಾನುವಾರುಗಳಲ್ಲಿ ಶೇ. 6ರಷ್ಟಕ್ಕೆ ಮಾತ್ರ ಜೀವ ವಿಮೆ ಮಾಡಲಾಗಿದೆ.

ಆದರೆ ಜಾನುವಾರುಗಳ ಬಗ್ಗೆ ಸರಕಾರದ ನೀತಿಯಲ್ಲೇ ಇರುವ ಈ ಎಲ್ಲಾ ನಿಯಂತ್ರಣಗಳು ಹಾಗೂ ಗೊಂದಲದಿಂದಾಗಿ, ಬಡವರ ಹೊಸ ಅರ್ಥ ವ್ಯವಸ್ಥೆಗೆ ಬೆದರಿಕೆ ಉಂಟಾಗಿದೆ. ನಿರುದ್ಯೋಗ ಸಮಸ್ಯೆ ಭಾರತವನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳುತ್ತಿರುವಾಗ ಜನರಿಗೆ ಹೈನುಗಾರಿಕೆ ಉದ್ಯಮ ಒಂದು ವರದಾನವಾಗಬಹುದಾಗಿತ್ತು. ಆದರೆ ರೈತನೊಬ್ಬನಿಗೆ ತಾನು ತನ್ನ ಜಾನುವಾರನ್ನು ಮಾರುವ ಬಗ್ಗೆ , ಮಾರಾಟ ಕುದುರಿಸುವಾಗ ತನ್ನ ಅಥವಾ ಗೋವಿನ ಭದ್ರತೆಯ ಬಗ್ಗೆ ಯಾವುದೇ ಖಚಿತತೆ, ಭದ್ರತೆ ಇಲ್ಲದಿದ್ದಲ್ಲಿ ಆಗ ಅರ್ಥವ್ಯವಸ್ಥೆ ಖಂಡಿತವಾಗಿಯೂ ಕುಸಿಯುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ಬಡವರ ಅರ್ಥವ್ಯವಸ್ಥೆಗೆ ಭಾವನೆ, ಭದ್ರತೆಯ ಭಾವನೆ ಕೂಡ ಬಹಳ ಮುಖ್ಯ.

(ಕೃಪೆ: thewire)

Writer - ರಿಚರ್ಡ್ ಮಹಾಪಾತ್ರ

contributor

Editor - ರಿಚರ್ಡ್ ಮಹಾಪಾತ್ರ

contributor

Similar News