×
Ad

ಅನಧಿಕೃತ ಪಂಪ್‌ಸೆಟ್ ಅಳವಡಿಕೆ ವಿರುದ್ಧ ಕ್ರಮ ಅಸಾಧ್ಯ: ಡಿ.ಕೆ.ಶಿವಕುಮಾರ್

Update: 2017-06-13 19:26 IST

ಬೆಂಗಳೂರು, ಜೂ.13: ರಾಜ್ಯದಲ್ಲಿರುವ ನದಿ, ಕೆರೆ, ಕಾಲುವೆಗಳಿಗೆ ಲಕ್ಷಾಂತರ ರೈತರು ಅನಧಿಕೃತವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿದ್ದು, ಈ ರೈತರುಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅಸಾಧ್ಯವಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೋರ್‌ವೆಲ್‌ಗಳನ್ನು ತೆಗೆಸಿದ ಬಳಿಕ ಅದರಲ್ಲಿ ಕಡಿಮೆ ನೀರು ಬರುತ್ತಿದ್ದರೆ, ಬೋರ್‌ವೆಲ್ ನೀರು ನಿಂತು ಹೋದರೆ ಹಾಗೂ ಬೋರ್‌ವೆಲ್‌ನ ನೀರು ಜಮೀನಿಗೆ ಸಾಕಾಗದಿದ್ದಾಗ ರೈತರುಗಳು 15 ರಿಂದ 20 ಕೀ.ಮೀ.ವರೆಗೆ ಅನಧಿಕೃತ ಪಂಪ್‌ಸೆಟ್‌ಗಳನ್ನು ಹಾಕಿ ನದಿ, ಕೆರೆ, ಕಾಲುವೆಗಳಿಂದ ನೀರನ್ನು ಪಡೆಯುತ್ತಾರೆ. ಈ ರೈತರುಗಳ ವಿರುದ್ಧ ಕ್ರಮ ಕೈಗೊಳ್ಳಲು ಹೋದರೆ ರೈತರು ಪ್ರತಿಭಟನೆಗೆ ಇಳಿಯುತ್ತಾರೆ ಹಾಗೂ ನಮ್ಮ ಕುರ್ಚಿ ಹಾಗೂ ನಿಮ್ಮ ಕುರ್ಚಿಗೂ ಸಂಚಕಾರ ಬರುತ್ತದೆ ಎಂದು ಹೇಳಿದರು.

ನೀರಾವರಿ ಅಳವಡಿಸಿಕೊಂಡಿರುವ ಪ್ರತಿ ರೈತನಿಗೂ ಸರಕಾರ 60 ಸಾವಿರ ರೂ.ವಿದ್ಯುತ್ ಸಬ್ಸಿಡಿ ನೀಡುತ್ತಿದ್ದು, ಇಡೀ ದೇಶದಲ್ಲಿಯೇ ಕರ್ನಾಟಕ ಹೆಚ್ಚು ವಿದ್ಯುತ್‌ನ್ನು ರೈತರಿಗೆ ಸಬ್ಸಿಡಿ ಮೂಲಕ ನೀಡುತ್ತಿದೆ ಎಂದು ಹೇಳಿದರು.

ಸದ್ಯ 4,84,690 ಅನಧಿಕೃತ ಪಂಪ್ ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದ್ದು, 3,63,065 ಪಂಪ್ ಸೆಟ್‌ಗಳಿಗೆ 10 ಸಾವಿರ ರೂ.ನಂತೆ ಪಾವತಿಸಲಾಗಿದೆ. 1,08,719ಪಂಪ್‌ಸೆಟ್‌ಗಳಿಗೆ 10 ಸಾವಿರ ರೂ.ನಂತೆ ಪಾವತಿಸಬೇಕಾಗಿದೆ. 2,48,574 ಪಂಪ್‌ಸೆಟ್‌ಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News