ಗಾಂಧೀಜಿ ಕುರಿತು ಹಗುರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಜೂ.13: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಹಾತ್ಮ ಗಾಂಧೀಜಿಯವರ ಕುರಿತು ನೀಡಿರುವ ಹಗುರ ಹೇಳಿಕೆಯನ್ನು ಖಂಡಿಸಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಿತಿಯ ಸದಸ್ಯರು ಪ್ರತಿಭಟಿಸಿದರು.
ಮಂಗಳವಾರ ನಗರದ ವೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಸದಸ್ಯರು, ಅಮಿತ್ ಶಾ ಅವರ ಪ್ರತಿಕೃತಿಯನ್ನು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಎಸ್.ಮನೋಹರ್ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಷ್ಟ್ರಪಿತ ಗಾಂಧಿ ಅವರನ್ನು ‘ಚತುರ ಬನಿಯಾ’ ಎಂಬ ವ್ಯಾಪಾರೀಕರಣದ ಹೆಸರಿಟ್ಟು ನಿಂದನೆ ಮಾಡಿದ್ದಾರೆ. ಆ ಮೂಲಕ ಇಡೀ ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದು ಆಗ್ರಹಿಸಿದರು.
ಮಹಾತ್ಮ ಗಾಂಧಿಯವರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಬಿಜೆಪಿಯವರ ಮನಸ್ಥಿತಿ ಜಗಜ್ಜಾಹೀರು ಆಗಿದೆ. ಗಾಂಧಿಯವರನ್ನು ಅವಹೇಳನ ಮಾಡಿರುವ ಅಮಿತ್ ಶಾ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಮಹಾತ್ಮ ಗಾಂಧಿಯ ಬಗ್ಗೆ ಹಗುರವಾಗಿ ಮಾತನಾಡಿ ದೇಶದಲ್ಲಿ ದೊಡ್ಡ ನಾಯಕನೆಂದು ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಗುಜರಾತ್‌ನಲ್ಲಿ ಗೃಹ ಸಚಿವರಾಗಿದ್ದಾಗ ಅನೇಕ ಮುಗ್ಧರನ್ನು ಕೊಲೆಗೈದು ಜೈಲುವಾಸ ಅನುಭವಿಸಿರುವ ಶಾ ಅವರು ಗಾಂಧಿ ಹೆಸರನ್ನು ಹೇಳಲು ಯಾವುದೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.
ಅಮಿತ್ ಶಾ ಹೇಳಿಕೆಯ ಕುರಿತು ಇದುವರೆಗೂ ಪ್ರಧಾನಿ ಮೋದಿ ತುಟಿ ಬಿಚ್ಚಿಲ್ಲ. ಈ ಕುರಿತು ಸಾರ್ವಜನಿಕವಾಗಿ ಮೋದಿಯವರು ವಿಷಾದ ವ್ಯಕ್ತಪಡಿಸಬೇಕು. ದೇಶದ ಸ್ವಾಸ್ಥವನ್ನು ಹಾಳು ಮಾಡುವಂಥ ಹೇಳಿಕೆಯನ್ನು ನೀಡಿರುವ ಅಮಿತ್ ಶಾ ಅವರನ್ನು ಗಡಿಪಾರು ಮಾಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸದಸ್ಯರಾದ ಜನಾರ್ದನ್, ಶೇಖರ್, ಸೌಮ್ಯ ಶಿವಶಂಕರ್ ಸೇರಿದಂತೆ ಇತರರು ಇದ್ದರು.