ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ಸರಕಾರದಿಂದ ಆಧಾರ್ ಲಿಂಕ್ ಮಾಡಲು ಚಿಂತನೆ: ಎ.ಮಂಜು

Update: 2017-06-13 16:27 GMT

ಬೆಂಗಳೂರು, ಜೂ.13: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ನೀಡಲು ಸರಕಾರವೇ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲು ಚಿಂತನೆ ನಡೆಸಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಎ.ಮಂಜು ಹೇಳಿದ್ದಾರೆ.

                      ಮಂಗಳವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಆಗಸ್ಟ್ 2016ರಿಂದ ಆಧಾರ್ ಆಧಾರಿತ ಬ್ಯಾಂಕ್ ಖಾತೆಗಳಿಗೆ ಕಡ್ಡಾಯವಾಗಿ ಪ್ರೋತ್ಸಾಹ ಧನವನ್ನು ನೀಡಲು ಸೂಚನೆ ನೀಡಲಾಗಿತ್ತು. ಆದರೆ, ಸದ್ಯ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ನೀಡಲು ಸರಕಾರವೇ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಿದರು.

                   423 ಮೇವು ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, 55401 ಟನ್ ಮೇವು ವಿತರಿಸಲಾಗಿದೆ. ಅಲ್ಲದೆ, ಅವಶ್ಯವಿರುವ ಕಡೆಗಳಲ್ಲಿ ಗೋಶಾಲೆಗಳನ್ನು ಸ್ಥಾಪಿಸಿ ಜಾನುವಾರು ರಕ್ಷಣೆ, ಮೇವು ಬ್ಯಾಂಕ್‌ಗಳ ಮೂಲಕ ರಿಯಾಯಿತಿ ದರದಲ್ಲಿ ಒಣಮೇವಿನ ವಿತರಣೆ ಮಾಡಲಾಗುತ್ತಿದೆ. ಹಾಗೂ ನೀರಾವರಿ ಸೌಲಭ್ಯವಿರುವ ರೈತರಿಗೆ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಹಸಿರು ಮೇವು ಬೆಳೆಯಲು ಹಾಗೂ ಖರೀದಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News