ಕೆಪಿಎಸ್ಸಿ: ಮಧ್ಯಂತರ ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2017-06-13 16:27 GMT

ಬೆಂಗಳೂರು, ಜೂ.13: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ (ಕೆಪಿಎಸ್ಸಿ) ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ವಿಧಿಸಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿ ಮೇಲಿನ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಆಯ್ಕೆಯಾಗಿರುವ 362 ಅಭ್ಯರ್ಥಿಗಳ ಪೈಕಿ ಆರ್.ರೇಣುಕಾಂಬಿಕೆ ಸೇರಿ ಒಟ್ಟು 12 ಜನರು ಸಲ್ಲಿಸಿರುವ ಅರ್ಜಿಗಳ ಮೇಲಿನ ವಾದ ಪ್ರತಿವಾದಗಳನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ವಿವರವಾಗಿ ಆಲಿಸಿತು.

ನಾವೆಲ್ಲಾ ಮುಗ್ಧರು. ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೂ ನಮಗೂ ಸಂಬಂಧವಿಲ್ಲ. ಆಯ್ಕೆಯಾಗಿರುವ ಅಭ್ಯರ್ಥಿಗಳು ಕಳಂಕಿತರು ಎಂಬುದಕ್ಕೆ ಯಾವುದೇ ಸಾಕ್ಷವಿಲ್ಲ. ಈ ಪ್ರಕರಣ ಸರಕಾರಿ ಸೇವೆಗೆ ಸಂಬಂಧಿಸಿದ ವಿಚಾರ. ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ, ಈ ಕುರಿತ ಪಿಐಎಲ್ ವಜಾ ಮಾಡಬೇಕು ಎಂಬುದು ಅರ್ಜಿದಾರರ ಮನವಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News