ಸಭಾಪತಿಯಾಗಿ ಡಿ.ಎಚ್.ಶಂಕರಮೂರ್ತಿ ಮುಂದುವರಿಕೆ

Update: 2017-06-15 13:18 GMT

ಬೆಂಗಳೂರು, ಜೂ.15: ವಿಧಾನ ಪರಿಷತ್ ಸಭಾಪತಿ ಸ್ಥಾನದಿಂದ ಡಿ.ಎಚ್.ಶಂಕರಮೂರ್ತಿ ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ಸದಸ್ಯರು ನಡೆಸಿದ್ದ ಪ್ರಯತ್ನ ವಿಫಲವಾಗಿದ್ದು, ಜೆಡಿಎಸ್ ಬೆಂಬಲದಿಂದಾಗಿ ಡಿ.ಎಚ್.ಶಂಕರಮೂರ್ತಿ  ಇನ್ನೆರಡು ತಿಂಗಳು ಸಭಾಪತಿಯಾಗಿ ಮುಂದುವರೆಯಲಿದ್ದಾರೆ. ಕಾಂಗ್ರೆಸ್ ಪಕ್ಷ ಶಂಕರಮೂರ್ತಿ ಅವರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ವಿರುದ್ಧ ಮತ ಚಲಾಯಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ನಿರ್ಣಯಿಸುವ ಮೂಲಕ ಶಂಕರಮೂರ್ತಿ ಅವರನ್ನೆ ಸದ್ಯಕ್ಕೆ ಸಭಾಪತಿಯನ್ನಾಗಿ ಮುಂದುವರೆಯಲು ಸಹಕಾರ ತೋರಿದಂತಾಗಿದೆ.

ಈ ನಡುವೆ ಸಭಾಪತಿ ಸ್ಥಾನದಿಂದ ಶಂಕರಮೂರ್ತಿ ಅವರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಪರಿಷತ್‌ಗೆ ಏಳು ಬಾರಿ ಆಯ್ಕೆಯಾಗಿರುವ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರನ್ನು ಕೂರಿಸಬೇಕೆಂಬ ದಿಢೀರ್ ಬೆಳವಣಿಗೆ ನಡುವೆಯೇ ನಡೆದ ರಾಜಕೀಯ ಆಟದಲ್ಲಿ ಬಿಜೆಪಿ ಜತೆಗಿನ ಸಖ್ಯ ಮುಂದುವರೆಸಲು ಜೆಡಿಎಸ್ ನಿರ್ಧರಿಸಿದ ಹಿನ್ನೆಲೆಯಲ್ಲಿ ಸಭಾಪತಿ ಶಂಕರಮೂರ್ತಿ ಅವರ ಸ್ಥಾನ ಅಭಾದಿತವಾಗಿದೆ.

ಸಭಾಪತಿ ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಪಕ್ಷ ತಂದಿದ್ದ ಅವಿಶ್ವಾಸದ ವಿರುದ್ಧ ಮತ ಚಲಾಯಿಸಲು ನಿರ್ಧರಿಸುವ ಮೂಲಕ ಇನ್ನೂ 2 ತಿಂಗಳ ಕಾಲ ಆ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟು ಆ ಬಳಿಕ ಕಾಂಗ್ರೆಸ್ ಪಕ್ಷ ನೀಡಿದ್ದ ಸಭಾಪತಿ ಸ್ಥಾನದ ಆಹ್ವಾನವನ್ನು ಬಿಜೆಪಿಯಿಂದಲೇ ಪಡೆಯುವ ಷರತ್ತನ್ನು ಬಿಜೆಪಿಗೆ ವಿಧಿಸಲಾಗಿದೆ.

ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲಿಸಿದರೆ ಆ ಪಕ್ಷದ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿಯನ್ನಾಗಿ ಮಾಡಲು ನಮ್ಮ ಅಭ್ಯಂತರವಿಲ್ಲ. ಅವರಿಗೆ ನಾವು ಬೆಂಬಲಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಧ್ಯಮಗಳಿಗೆ ತಿಳಿಸಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಟಿ.ಎ.ಶರವಣ, ಕಾಂಗ್ರೆಸ್‌ನ ಈ ನಿರ್ಧಾರ ವಿಳಂಬವಾಗಿದೆ. ಈ ಮೊದಲೇ ತಿಳಿಸಿದ್ದರೆ ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದಿತ್ತು ಎನ್ನುವ ಮೂಲಕ ಶಂಕರಮೂರ್ತಿ ಅವರನ್ನೇ ಬೆಂಬಲಿಸುವ ಸೂಚನೆ ನೀಡಿದ್ದರು.

ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ಸಭೆಯ ಬಗ್ಗೆ ವಿಷಯ ತಿಳಿಸಿದ ಜೆಡಿಎಸ್ ಉಪನಾಯಕ ಕೆ.ಟಿ.ಶ್ರೀಕಂಠೇಗೌಡ, ಇನ್ನೆರಡು ತಿಂಗಳ ಕಾಲ ಶಂಕರಮೂರ್ತಿ ಅವರೇ ಸಭಾಪತಿಯಾಗಿ ಮುಂದುವರೆಸಲು ನಿರ್ಧರಿಸಿ ಆ ಬಳಿಕ ಜೆಡಿಎಸ್ ಆ ಸ್ಥಾನ ಪಡೆಯುವ ಬಗ್ಗೆ ಷರತ್ತು ವಿಧಿಸಲಾಗಿದೆ ಎಂದರು.

ಈ ನಡುವೆ ಉಪಸಭಾಪತಿ ಮರಿತಿಬ್ಬೇಗೌಡ  ಕಚೇರಿಯಲ್ಲಿ ಕುಮಾರಸ್ವಾಮಿ  ನಡೆಸುತ್ತಿದ್ದ ಸಭೆಗೆ ಆಗಮಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಸದಸ್ಯ ವಿ. ಸೋಮಣ್ಣ, ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿ ಜೆಡಿಎಸ್ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಪಕ್ಷ ತಂದಿರುವ ಅವಿಶ್ವಾಸದ ವಿರುದ್ಧ ಜೆಡಿಎಸ್ ಪಕ್ಷ ಮತ ಚಲಾಯಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಅದಕ್ಕಾಗಿ ಅಭಿನಂದಿಸುವುದಾಗಿ ಹೇಳಿದರು.

ಸಭೆಯ ಬಳಿಕ ಜೆಡಿಎಸ್ ಸದಸ್ಯರು ಸದನಕ್ಕೆ ಆಗಮಿಸುತ್ತಿದ್ದಂತೆ ಸಭಾಪತಿಸ್ಥಾನದಲ್ಲಿದ್ದ ಉಪಸಭಾಪತಿ ಮರಿತಿಬ್ಬೇಗೌಡ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವನ್ನು ಕೈಗೆತ್ತಿಕೊಂಡು ಆಡಳಿತ ಪಕ್ಷದ ಸದಸ್ಯ ವಿ.ಎಸ್. ಉಗ್ರಪ್ಪಅವರಿಗೆ ಚರ್ಚೆ ಪ್ರಾರಂಭಿಸುವಂತೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News