ಜಂತಕಲ್ ಮೈನಿಂಗ್ ಪ್ರಕರಣ: ಜೂ.20 ರವರೆಗೆ ಎಚ್‌ಡಿಕೆ ಬಂಧಿಸದಂತೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜೂ.15: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಮುಂದಿನ ವಿಚಾರಣೆವರೆಗೆ ಬಂಧಿಸದಂತೆ ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ಸೂಚಿಸಿದೆ.
ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಇದರಿಂದ ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಿದ್ದು, ಮಂಗಳವಾರದವರೆಗೆ ಕುಮಾರಸ್ವಾಮಿ ಅವರನ್ನು ಬಂಧಿಸದಂತೆ ಎಸ್‌ಐಟಿ ಅಧಿಕಾರಿಗಳಿಗೆ ಸೂಚಿಸಿದೆ.
ಮಂಗಳವಾರ ಲೋಕಾಯುಕ್ತ ಕೋರ್ಟ್ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಬಳಿಕ ಕುಮಾರಸ್ವಾಮಿ ಪರ ವಕೀಲ ಹಷ್ಮತ್ ಪಾಷ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿ ವಿಚಾರಣೆಗೆ ಬರದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಪರ ವಕೀಲರು ತಮ್ಮ ಅರ್ಜಿ ಪರಿಗಣಿಸುವಂತೆ ಜ್ಞಾಪನಾ ಅರ್ಜಿ ಸಲ್ಲಿಸಿದ್ದರು. ಇದೀಗ ಕುಮಾರಸ್ವಾಮಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಸದ್ಯಕ್ಕೆ ಬಂಧನ ಭೀತಿಯಿಂದ ಪಾರಾಗಿದ್ದಾರೆ. ಇನ್ನು ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿ ಪರ ವಕೀಲರು ಹೈಕೋರ್ಟ್‌ಗೆ ಕಾಲಾವಕಾಶ ಸಹ ಕೋರಿದ್ದಾರೆ.
ಜಂತಕಲ್ ಪ್ರಕರಣದ ಎರಡನೆ ಆರೋಪಿ ಹಿರಿಯ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ, ಜಂತಕಲ್ ಕಂಪೆನಿಗೆ ಪರವಾನಗಿ ನೀಡಲು ಅಂದಿನ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ತಮಗೆ ಒತ್ತಡ ಹೇರಿದ್ದರು ಎಂದು ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಹೇಳಿಕೆ ಆಧರಿಸಿಯೇ ಕುಮಾರಸ್ವಾಮಿಯನ್ನು ಮೂರನೆ ಆರೋಪಿಯನ್ನಾಗಿ ಪರಿಗಣಿಸಲಾಗಿದೆ. ಎರಡನೆ ಆರೋಪಿ ಗಂಗಾರಾಮ್ ಬಡೇರಿಯಾರನ್ನು ಬಂಧಿಸಿದಂತೆ ತಮ್ಮನ್ನೂ ಸಹ ಬಂಧಿಸಬಹುದೆನ್ನುವ ಭೀತಿ ಇರುವ ಕುಮಾರಸ್ವಾಮಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.