ನರೇಗ ಯೋಜನೆಯಡಿಯ 60 ಲಕ್ಷ ಕಾರ್ಮಿಕರು ಕಾರ್ಮಿಕ ಮಂಡಳಿ ವ್ಯಾಪ್ತಿಗೆ: ಸಂತೋಷ್ ಲಾಡ್
ಬೆಂಗಳೂರು, ಜೂ.15: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ರಾಜ್ಯದಲ್ಲಿನ 60 ಲಕ್ಷ ಕಾರ್ಮಿಕರನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವ್ಯಾಪ್ತಿಗೆ ತರಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ನರೇಗ ಕಾರ್ಮಿಕರನ್ನು ಮಂಡಳಿ ವ್ಯಾಪ್ತಿಗೆ ತರುವುದಲ್ಲದೆ, ಕೃಷಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರನ್ನು ಮಂಡಳಿ ವ್ಯಾಪ್ತಿಗೆ ತಂದು ನೋಂದಣಿ ಮಾಡಲಾಗುವುದು ಎಂದರು.
ರಾಜ್ಯದಲ್ಲಿ 1.30 ಕೋಟಿ ಮಂದಿ ಸಂಘಟಿತ ಕಾರ್ಮಿಕರಿದ್ದು, ಆ ಪೈಕಿ 10 ಲಕ್ಷ ಮಂದಿಯನ್ನು ಮಂಡಳಿತ ವ್ಯಾಪ್ತಿಗೆ ತಂದು ಅವರಿಗೆ ಪಿಎಫ್ ಸೌಲಭ್ಯ ಕಲ್ಪಿಸಲಾಗಿದೆ ಎಂದ ಅವರು, ರಾಜ್ಯದಲ್ಲಿ 11.2ಲಕ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಉಡುಪಿ ಜಿಲ್ಲೆಯಲ್ಲಿ 2017ರ ಮಾರ್ಚ್ ಅಂತ್ಯಕ್ಕೆ 25,627 ಮಂದಿ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಉಳಿದ ಕಾರ್ಮಿಕರನ್ನು ನೋಂದಣಿ ಮಾಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದ ಅವರು, ಎಲ್ಲ ಕಾರ್ಮಿಕರಿಗೆ ಇಲಾಖೆ ಸೌಲಭ್ಯ ದೊರಕಿಸಿಕೊಡಲು ಬದ್ಧ ಎಂದು ಭರವಸೆ ನೀಡಿದರು.