ನಾವೇನು ಚಿಕಿತ್ಸಾ ವೆಚ್ಚ ಭರಿಸುವಂತೆ ಅರ್ಜಿ ಹಾಕಿಕೊಂಡಿರಲಿಲ್ಲ: ಸಾಲು ಮರದ ತಿಮ್ಮಕ್ಕ
ಬೆಂಗಳೂರು, ಜೂ. 15: ಸಾಲು ಮರದ ತಿಮ್ಮಕ್ಕಅವರ ಎಲ್ಲ ಚಿಕಿತ್ಸಾ ವೆಚ್ಚವನ್ನು ಸರಕಾರದಿಂದ ಭರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿಕೆಯನ್ನು ಸಾಲು ಮರದ ತಿಮ್ಮಕ್ಕ ಖಂಡಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೇನು ಸರಕಾರದಿಂದ ಚಿಕಿತ್ಸೆ ವೆಚ್ಚ ಭರಿಸುವಂತೆ ಅರ್ಜಿ ಹಾಕಿಕೊಂಡಿರಲಿಲ್ಲ. ಮಗ, ಸಂಬಂಧಿಕರು, ಸ್ನೇಹಿತರು ಸಾಲ ಮಾಡಿ ಚಿಕಿತ್ಸೆಗೆ ಹಣ ನೀಡಿದ್ದಾರೆ. ಆದರೆ, ಸಚಿವರು ಸದನದಲ್ಲಿ ನೀಡಿರುವ ಹೇಳಿಕೆ ಖಂಡನಾರ್ಹವಾದುದು. ಸರಕಾರದಿಂದ ಇದುವರೆಗೂ ಒಂದು ರೂ.ಗಳಷ್ಟು ಹಣ ನನ್ನ ಚಿಕಿತ್ಸೆ ಖರ್ಚಿಗೆ ನೀಡಿಲ್ಲ ಎಂದು ಹೇಳಿದರು.
ಸಚಿವರು ಸುಳ್ಳು ಹೇಳುವುದರ ಮೂಲಕ ನಮಗೇನು ಆಗಲ್ಲ. ಅವರ ಮೇಲಿನ ಗೌರವ ಹಾಗೂ ಸಚಿವರಿಗೆ ಇರುವ ಬೆಲೆ ಕಡಿಮೆಯಾಗುತ್ತದೆ. ಏನಾದರೂ ಹೇಳುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳಬೇಕು. ಸುಮ್ಮನೆ ಪ್ರಚಾರಕ್ಕಾಗಿ ಮಾತನಾಡಬಾರದು ಎಂದು ಅವರು ದೂರಿದರು.
ತಿಮ್ಮಕ್ಕ ಅವರ ಮಗ ಡಾ.ಉಮೇಶ್ ಮಾತನಾಡಿ, ವಿಧಾನಸೌಧದಲ್ಲಿ ಶಾಸಕ ಸುನೀಲ್‌ಕುಮಾರ್ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ತಿಮ್ಮಕ್ಕಗೆ 500 ವೃದ್ಧಾಪ್ಯ ವೇತನ ಹೊರತುಪಡಿಸಿ ಬೇರೆ ಏನನ್ನು ನೀಡಿಲ್ಲ ಎಂದು ಉತ್ತರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವೆ ಉಮಾಶ್ರೀ ತಿಮ್ಮಕ್ಕರ ಎಲ್ಲ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಸರಕಾರದಿಂದ ಭರಿಸಿದೆ ಎಂದು ಹೇಳಿದರು. ಇದು ಸುಳ್ಳಾಗಿದ್ದು, ಚಿಕಿತ್ಸೆ ವೆಚ್ಚ ಭರಿಸಿರುವ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಹೇಳಿದರು.
ಸರಕಾರದ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವೆ ಉಮಾಶ್ರೀ ಕನಿಷ್ಠ ಜ್ಞಾನವಿಲ್ಲದಂತೆ ವರ್ತಿಸಿದ್ದಾರೆ. ಹಲವು ಬಾರಿ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದೆವು. ಆದರೆ, ಒಂದು ಬಾರಿಯೂ ಬಿಲ್ ಪಾವತಿ ಮಾಡಿಲ್ಲ. ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದ ಅವರು, ನಾವೆಂದು ಅರ್ಜಿ ಹಾಕಿಕೊಂಡು ಹೋಗಿರಲಿಲ್ಲ. ಸಾಲು ಮರದ ತಿಮ್ಮಕ್ಕರಿಗೆ ತಮ್ಮದೇ ಆದ ಗೌರವವಿದೆ. ಆ ಗೌರವವನ್ನು ಹಾಳು ಮಾಡುವ ನಿಟ್ಟಿನಲ್ಲಿ ಸಚಿವರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಸಚಿವರು ಅಧಿಕಾರವಿದೆ ಎಂದು ಬೇಕಾಬಿಟ್ಟಿ ಮಾತನಾಡುವುದನ್ನು ಬಿಡಬೇಕು. ಅಧಿಕಾರ ಶಾಶ್ವತವಾದುದಲ್ಲ ಎಂದ ಅವರು, ಸಾಲು ಮರದ ತಿಮ್ಮಕ್ಕನ ಚಿಕಿತ್ಸೆಯ ವೆಚ್ಚ ಭರಿಸಿರುವ ದಾಖಲೆಗಳಿದ್ದರೆ ಸದನದಲ್ಲಿ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಸಾರ್ವಜನಿಕವಾಗಿ ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.