ಹೆದ್ದಾರಿ ಸುಲಿಗೆಕೋರರ ಬಂಧನ: 15ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶ

Update: 2017-06-15 15:09 GMT

ಬೆಂಗಳೂರು, ಜೂ.15: ನೈಸ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದ 12ಮಂದಿ ಕುಖ್ಯಾತ ಸರಗಳ್ಳರನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಪೊಲೀಸರು ಬಂಧಿಸಿ 15ಲಕ್ಷ ರೂ. ವೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್ ಹಾಗೂ ದ್ವಿಚಕ್ರ ವಾಹಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಬೇಗೂರು ನಿವಾಸಿಗಳಾದ ಸಾವನ್(24), ಮೋನಿಶಾ(20), ಮುತ್ತು(20), ಪುನೀತ್(19), ತುಳಸಿರಾಮ್(23), ಅರುಣ್ ಯೇಸುರಾಜ್(23), ಸ್ಟಿಫನ್ ರಾಜ್(22), ವ್ನಿೇಶ್(18), ದೊಡ್ಡಬಳ್ಳಾಪುರದ ಅಮರ್(25), ಬನ್ನೇರುಘಟ್ಟದ ಶಾಂತಕುಮಾರ್(21), ಆರ್.ಟಿ.ನಗರದ ದೀಪಕ್ ರಾಜ್(21) ಬಂಧಿತ ಹೆದ್ದಾರಿ ಸುಲಿಗೆಕೋರರಾಗಿದ್ದಾರೆ.

ಇತ್ತೀಚಿಗೆ ಕೆಲವು ದಿನಗಳಿಂದ ಈ ಆರೋಪಿಗಳು ಮಹಿಳೆಯನ್ನು ಬಳಸಿಕೊಂಡು ವಾಹನ ಸವಾರರನ್ನು ಆಕರ್ಷಿಸುವಂತೆ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸುಲಿಗೆ ಮಾಡುತ್ತಿದ್ದರು. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಲ್ಲಿ ಹುಲವಳ್ಳಿಯ ಶಾಂತಕುಮಾರ್, ತಮಿಳುನಾಡಿನ ಕೇಶವಮೂರ್ತಿ,ಆರ್.ಟಿ.ನಗರದ ದೀಪಕ್ ಜಾರ್ಜ್ ಇತರರೊಂದಿಗೆ ಸೇರಿಕೊಂಡು 25ಕ್ಕೂ ಹೆಚ್ಚು ಸುಲಿಗೆ ಮಾಡಿರುವುದರ ಕುರಿತು ವಿಚಾರಣೆಯಿಂದ ತಿಳಿದು ಬಂದಿದೆ. ಈ ಪ್ರಕರಣಗಳಲ್ಲಿ 12.50ಲಕ್ಷ ರೂ.ವೌಲ್ಯದ 450ಗ್ರಾಂ ಚಿನ್ನದ ಸರ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಆರೋಪಿಗಳ ಬಂಧನದಿಂದ ಎಲೆಕ್ಟ್ರಾನಿಕ್ ಸಿಟಿಯ 12 ಪ್ರಕರಣ, ಹೆಬ್ಬಗೋಡಿ 6, ಆನೇಕಲ್ 2 , ಬನ್ನೇರುಘಟ್ಟ 1, ಹುಳಿಮಾವು 2 ಹಾಗೂ ಜಿಗಣಿ ಠಾಣೆ 1 ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ.

ಆರೋಪಿ ಸವನ್ ಸುಮಾರು ಒಂದು ವರ್ಷದ ಹಿಂದೆ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಸುಗಲಿ ಮಾಡಿ ಪರಾರಿಯಾಗುತ್ತಿದ್ದ ವೇಳೆ ಸಾರ್ವಜನಿಕರ ಸಹಾಯದಿಂದ ಪೊಲೀಸರು ಬಂಧಿಸಿದ್ದರು.ಆರೋಪಿ ಸವನ್ 2011ರಿಂದಲೂ ಸುಲಿಗೆ, ಡಕಾಯಿತಿ, ಕೊಲೆ ಪ್ರಕರಣಗಳಲ್ಲಿ ಬಾಗಿಯಾಗಿ ಹಲವಾರು ಬಾರಿ ಜೈಲುವಾಸ ಅನುಭವಿಸಿದ್ದಾನೆ. ಈ ಹಿಂದೆ ಸಹಚರ ಶಾಂತಕುಮಾರ್, ಕೇಶವಮೂರ್ತಿ ಅವನೊಂದಿಗೆ ತಮಿಳುನಾಡಿನ ಥಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ಧ ಸಿಸಿಬಿ, ಅತ್ತಿಬೆಲೆ, ಥಳಿ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.ಆರೋಪಿಗಳೆಲ್ಲರೂ ಗಾಂಜಾ ವ್ಯಸನಿಗಳಾಗಿದ್ದು, ರಾತ್ರಿ ವೇಳೆ ಮನೆಗಳಲ್ಲಿ ಮಲಗದೆ ನೀಲಗಿರಿ ತೋಪು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿ ಮಲಗುತ್ತಿದ್ದರು. ಸುಲಿಗೆ ಮಾಡಿದ್ದ ಅಭರಣಗಳನ್ನು ದಾರಿ ಹೋಕರಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ದುಶ್ಚಟ ಹಾಗೂ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News