ಖಾಸಗಿ ವೈದ್ಯಕೀಯ ತಿದ್ದುಪಡಿ ಕಾಯ್ದೆ-2017 ವಿರೋಧಿಸಿ ಪ್ರತಿಭಟನಾ ಧರಣಿ

Update: 2017-06-15 16:15 GMT

ಬೆಂಗಳೂರು, ಜೂ. 15: ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಕಾಯ್ದೆ-2017ರನ್ನು ಜಾರಿ ಮಾಡಲು ಮುಂದಾಗಿರುವ ಸರಕಾರದ ಕ್ರಮ ಖಂಡಿಸಿ ಖಾಸಗಿ ಮತ್ತು ಸರಕಾರಿ ವೈದ್ಯರು  ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದಾರೆ.

ಸರಕಾರದ ಈ ನೂತನ ಕಾಯ್ದೆ ಪ್ರಕಾರ ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿದ ಚಿಕಿತ್ಸಾ ದರಕ್ಕಿಂತ ಹೆಚ್ಚು ಹಣ ಪಡೆಯುವಂತಿಲ್ಲ. ಒಂದು ವೇಳೆ ಹೆಚ್ಚಿನ ದರ ಪಡೆಯುವುದು ದೃಢಪಟ್ಟರೆ ಅವರಿಂದ 5 ಲಕ್ಷ ರೂ.ಗಳು ದಂಡ ಮತ್ತು ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕುರಿತ ಪ್ರಸ್ತಾಪವಿದೆ.ಅಲ್ಲದೆ, ವೈದ್ಯರ ತಪ್ಪುಗಳ ಕುರಿತು ದೂರು ಸಲ್ಲಿಸಲು ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲು ಈ ಕಾಯ್ದೆಯಲ್ಲಿ ಉಲ್ಲೇಖವಿದೆ. ಹೀಗಾಗಿ ಖಾಸಗಿ ವೈದ್ಯರು ಇದನ್ನು ವಿರೋಧ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಇಂದು ಹಮ್ಮಿಕೊಂಡಿರುವ ಪ್ರತಿಭಟನಾ ಧರಣಿಯಲ್ಲಿ 15 ಸಾವಿರಕ್ಕೂ ಅಧಿಕ ವೈದ್ಯರು ಭಾಗವಹಿಸುತ್ತಿದ್ದಾರೆ. ಧರಣಿಯ ಅಂಗವಾಗಿ ನಗರದ ಕೆಂಪೇಗೌಡ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೆ ರ್ಯಾಲಿ ಹಮ್ಮಿಕೊಂಡಿದ್ದು, ನಂತರ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತದೆ.

ಧರಣಿಯ ಹಿನ್ನೆಲೆಯಲ್ಲಿ ತುರ್ತು ಸೇವೆಗಳು ಹೊರತುಪಡಿಸಿ ರಾಜ್ಯಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿ ಸೇವೆ ಸ್ಥಗಿತಗೊಳ್ಳಲಿದೆ. ಅಲ್ಲದೆ, ಖಾಸಗಿ ವೈದ್ಯಕೀಯ ತಿದ್ದುಪಡಿ ಕಾಯ್ದೆಯಲ್ಲಿ ಸರಕಾರಿ ವೈದ್ಯರನ್ನು ಸೇರಿಸಿರುವುದರಿಂದ ಸರಕಾರಿ ವೈದ್ಯರು ಪ್ರತಿಭಟನೆಗೆ ಕೈ ಜೋಡಿಸುವ ಸಾಧ್ಯತೆಯಿದೆ. ಇದರಿಂದಾಗಿ ಸಾರ್ವಜನಿಕ ವೈದ್ಯಕೀಯ ಸೇವೆ ಅಸ್ತವ್ಯಸ್ಥವಾಗಲಿದೆ ಎಂದು ತಿಳಿದು ಬಂದಿದೆ.

ಆರೋಗ್ಯ ಸಚಿವ ರಮೇಶ್‌ಕುಮಾರ್ ಖಾಸಗಿ ವೈದ್ಯರನ್ನು ದರೋಡೆಕೋರರು, ಸುಲಿಗೆಕೋರರು ಎಂದು ಕರೆದಿರುವುದನ್ನು ವೈದ್ಯರು ತೀವ್ರವಾಗಿ ಖಂಡಿಸಿದ್ದಾರೆ. ಸಚಿವರಿಂದ ಇಂತಹ ಪ್ರತಿಕ್ರಿಯೆ ನಾವು ನಿರೀಕ್ಷಿಸಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ವೈದ್ಯರು, ಸರಕಾರ ಯಾವುದೇ ಕಾರಣಕ್ಕೂ ಕರ್ನಾಟಕ ಖಾಸಗಿ ವೈದ್ಯಕೀಯ (ತಿದ್ದುಪಡಿ) ಕಾಯ್ದೆ 2017ಅನ್ನು ಮಂಡಿಸಬಾರದು. ಒಂದು ವೇಳೆ ವಿಧಾನಸಭೆಯಲ್ಲಿ ಮಂಡಿಸಲು ಮುಂದಾದರೆ ತೀವ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News