ಮೀಸಲಾತಿಯ ಅಗತ್ಯ ಯಾಕೆ ಬೇಕೆಂದರೆ...

Update: 2017-06-16 10:32 GMT

1. ‘‘ಎಸ್ಸಿ-ಎಸ್ಟಿ ಕ್ಯಾಟಗರಿಯ ವಿದ್ಯಾರ್ಥಿಗಳು ಸಿಇಟಿಯಲ್ಲಿ ಹತ್ತು-ಹನ್ನೆರಡು ಸಾವಿರ ರ್ಯಾಂಕ್ ಪಡೆದರೂ ಮೆಡಿಕಲ್ ಸೀಟ್ ಸಿಕ್ಕಿಬಿಡುತ್ತದೆ’’

2.‘‘ಜನರಲ್ ಕ್ಯಾಟಗರಿಯ ವಿದ್ಯಾರ್ಥಿಗಳಿಗೆ ಒಂದು ಕಟ್ ಆಫ್ ಅಂಕಗಳು, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಅದಕ್ಕಿಂತ ಕಡಿಮೆ ಇರುವ ಮತ್ತೊಂದು ಕಟ್ ಆಫ್ ಅಂಕಗಳು. ಇದು ಯಾವ ನ್ಯಾಯ ಸ್ವಾಮಿ?!’’

3. ‘‘ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಗವರ್ನಮೆಂಟೇ ಸಂಪೂರ್ಣ ಶುಲ್ಕ ಪಾವತಿಸಿಬಿಡುತ್ತದೆ. ಯಾಕೆ ಜನರಲ್‌ನಲ್ಲಿ ಬಡವರಿಲ್ವಾ?’’

ಇವು ನಮ್ಮ ಯುವಕರು, ಪೋಷಕರು ಮೀಸಲಾತಿ ಎಂದೊಡನೆ ಕಣ್ಣು ಕೆಂಪಾಗಿಸಿಕೊಂಡು ದೂರುವ ದೂರುಗಳು. ಇನ್ನು ಯಾರೇ ಈ ಹೇಳಿಕೆಗಳನ್ನು ಮೇಲ್ನೋಟದಲ್ಲಿ ಅವಲೋಕಿಸಿದರೇ, ‘ಅರೇ! ಹೌದಲ್ಲವೇ?’ ಎಂದು ಮೀಸಲಾತಿಯ ಬಗ್ಗೆ ಒಂದೇ ಕ್ಷಣದಲ್ಲಿ ನಕರಾತ್ಮಕವಾದ ತೀರ್ಮಾನಕ್ಕೆ ಬಂದುಬಿಡುವ ಸಾಧ್ಯತೆ ಹೆಚ್ಚಿರುತ್ತದೆ.

ನಿಜ ಹೇಳಬೇಕೆಂದರೆ, ಮೂರ್ನಾಲ್ಕು ವರ್ಷಗಳ ಹಿಂದೆ ಸಾಮಾಜಿಕ ನ್ಯಾಯದ ಬಗ್ಗೆ, ಶತ-ಶತಮಾನಗಳ ಅನ್ಯಾಯದ ಬಗ್ಗೆ ಕೊಂಚ ಜ್ಞಾನವಿದ್ದ ನಾನೂ ಸಹ, ಇದೇ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನನ್ನ ತಂದೆಯವರ ಜೊತೆ ಮೀಸಲಾತಿ ವಿರುದ್ಧ ಹಲವಾರು ಬಾರಿ ವಾದ ಮಾಡಿದ್ದೇನೆ. ಆಗಿನ್ನೂ ವೈಚಾರಿಕವಾಗಿ ಕಣ್ಣುಬಿಡುತ್ತಿದ್ದವನು ನಾನು. ಸರಿಯಾದ ಪೂರಕ ಶಿಕ್ಷಣವಿಲ್ಲದ ತರುಣರು, ತಮ್ಮ ಭವಿಷ್ಯ ನಿರ್ಧಾರವಾಗುವಂತಹ ಸಂದರ್ಭದಲ್ಲಿ ಮೀಸಲಾತಿಯ ಬಗ್ಗೆ ಕೆಂಡಕಾರುತ್ತ ಆವೇಶಕ್ಕೆ ಒಳಗಾಗುವಂತಹದ್ದು ಇಂದಿನ ವ್ಯವಸ್ಥೆಯಲ್ಲಿ ಸರ್ವೇಸಾಮಾನ್ಯ.
ಇನ್ನು ನಾನು ಮೇಲೆ ಉಲ್ಲೇಖಿಸಿದ ಹೇಳಿಕೆಗಳ ವಿಚಾರಕ್ಕೆ ಬರುವುದಾದರೆ, ನೀವು ಈ ಹೇಳಿಕೆಗಳ ಕುರಿತು ಸರಿಯಾಗಿ ಅಧ್ಯಯನ ಮಾಡಿದರೆ ಸತ್ಯಾ-ಸತ್ಯತೆ ಸುಲಭವಾಗಿ ತಿಳಿಯುತ್ತದೆ.

ಮೊದಲನೆಯ ಹೇಳಿಕೆ, ಹತ್ತು-ಹನ್ನೆರಡು ಸಾವಿರ ರ್ಯಾಂಕ್ ಬಂದರೂ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಸಿಗುತ್ತದೆ ಎಂಬುದು. ಇದು ಯಾಕೆ ಹೀಗೆ? ಎಂದು ನಿಮಗೆ ಅನಿಸಿದರೆ, ಒಮ್ಮೆ ಕಳೆದ ಎರಡ್ಮೂರು ವರ್ಷಗಳ ಸಿಇಟಿ ರ್ಯಾಂಕ್ ಪಟ್ಟಿಯನ್ನೊಮ್ಮೆ ನೋಡಿ. ಐದು ಸಾವಿರ ರ್ಯಾಂಕ್‌ವರೆಗೆ ಇರುವ ವಿದ್ಯಾರ್ಥಿಗಳಲ್ಲಿ, ನಿಮಗೆ ದಲಿತ-ದಮನಿತ ವರ್ಗದ ಐನೂರು ವಿದ್ಯಾರ್ಥಿಗಳು ಸಿಗುವುದೂ ಕಷ್ಟ.

ನನ್ನದೇ ಬ್ಯಾಚ್‌ನ ಸಿಇಟಿ ರ್ಯಾಂಕ್ ಪಟ್ಟಿಯಲ್ಲಿ, ಎರಡು ಸಾವಿರ ರ್ಯಾಂಕ್ ಒಳಗಿನ ವಿದ್ಯಾರ್ಥಿಗಳ ಮೇಲೆ ಕಣ್ಣಾಡಿಸಿದಾಗ, ನನಗೆ ಸಿಕ್ಕಿದ್ದು ಕೇವಲ ಐವತ್ತಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು!!!ಇದು ಏನನ್ನು ಸೂಚಿಸುತ್ತದೆ ಹೇಳಿ?! ದಲಿತ-ದಮನಿತ ವಿದ್ಯಾರ್ಥಿಗಳು ಈ ಕಾಲದಲ್ಲೂ ಸಹ ಬೇರೆ ವರ್ಗದ ವಿದ್ಯಾರ್ಥಿಗಳೊಡನೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನಲ್ಲವೇ?. ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದೊಡನೆ ನೀವು ‘‘ಇದಕ್ಕೆ ಸರಿಯಾದ ಕೋಚಿಂಗ್ ಪಡೆದಿಲ್ಲ, ಅದಕ್ಕೆ ರ್ಯಾಂಕ್ ಬಂದಿಲ್ಲ’’ ಎಂಬ ತೀರ್ಮಾನಕ್ಕೆ ಬಂದುಬಿಟ್ಟರೆ ಇದು ನಿಮ್ಮ ಅಜ್ಞಾನವನ್ನಲ್ಲದೆ ಬೇರೇನನ್ನೂ ತೋರುವುದಿಲ್ಲ. ಏಕೆಂದರೆ, ಎಳೆಯ ಮಕ್ಕಳ ಮನಸ್ಸಿಗೆ ಶಿಕ್ಷಣವೊಂದೇ ಪ್ರಭಾವ ಬೀರುವುದಿಲ್ಲ. ಸಣ್ಣ-ಸಣ್ಣ ನೋವು-ಅವಮಾನ, ಬಡತನ, ಪೋಷಕರ ಅನಕ್ಷರತೆ ಇತ್ಯಾದಿಗಳು ಶಿಕ್ಷಣಕ್ಕಿಂತ ಹೆಚ್ಚು ಪ್ರಭಾವ ಬೀರುತ್ತವೆ.

ಇನ್ನು ಎರಡನೆ ಹೇಳಿಕೆ ಕಟ್ ಆಫ್ ಅಂಕಗಳ ಬಗ್ಗೆ. ನಾನು ಮೇಲೆ ವಿವರಿಸಿದಂತೆ, ಒಟ್ಟಾರೆ ರ್ಯಾಂಕ್ ಪಟ್ಟಿಯಲ್ಲಿ ಶೇ. 20ರಷ್ಟು ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಬರುವುದೇ ದೊಡ್ಡ ಮಾತು. ಹೀಗಿರುವಾಗ, ಎಲ್ಲರಿಗೂ ಒಂದೇ ಕಟ್ ಆಫ್ ಅಂಕಗಳನ್ನಿಟ್ಟು ಬಿಟ್ಟರೆ, ಶೇ.20 ಇರಲಿ ಶೇ. 10 ಬರುವುದೂ ಕಷ್ಟವಾಗಿ ಬಿಡುತ್ತದೆ.

ಇನ್ನು ಮೂರನೆ ಹೇಳಿಕೆ, ಶುಲ್ಕದ ಬಗ್ಗೆ. ದಯಮಾಡಿ ಒಂದನ್ನು ಎಲ್ಲರೂ ಮನದಲ್ಲಿಡಿ. ಮೀಸಲಾತಿಯ ಮೂಲ ಉದ್ದೇಶ ಸಾಮಾಜಿಕ ನ್ಯಾಯ ಒದಗಿಸಿ, ಸಮಾನತೆ ತರುವುದೇ ವಿನಃ ಬರೀ ಅರ್ಥಿಕವಾಗಿ ಬಲಿಷ್ಠ ಮಾಡುವುದಲ್ಲ. ಆರ್ಥಿಕವಾಗಿ ಬಲಿಷ್ಠವಾಗಿರುವ ಎಂತದೇ ಅಧಿಕಾರವುಳ್ಳ ದಲಿತ ವರ್ಗದ ಅಧಿಕಾರಿಯು ಮನೆಗೆ ಬಂದರೆ, ನೆಟ್ಟಗೆ ಕಾಫಿ-ಟೀ ಕೊಡದ ಮನೆಗಳು ಇಂದಿಗೂ ಗಲ್ಲಿ-ಗಲ್ಲಿಗೆ ಹತ್ತಾರು ಸಿಗುತ್ತವೆ. ಇನ್ನು, ತೀರಾ ಬಡವನಾದ ಬ್ರಾಹ್ಮಣನ ಅಥವಾ ಮೇಲ್ಜಾತಿಯವನ ಮನೆಯಲ್ಲಿ, ದಲಿತ-ದಮನಿತರನ್ನು ಮನೆ ಒಳಗೆ ಕೂರಿಸಿ ಮುಖಕ್ಕೆ ಮುಖ ಕೊಟ್ಟು ಕುಶಲೋಪರಿ ವಿಚಾರಿಸುವ ವ್ಯವಸ್ಥೆ ಈ ಸಮಾಜದಲ್ಲಿ ಇನ್ನೂ ಬೇರೂರಿಲ್ಲ. ಇದು ಈ ಹೇಳಿಕೆಗಳ ಹಿಂದಿರುವ ವಾಸ್ತವ!!! ಇಂತಹ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿ ಕೊಟ್ಟು ಮೇಲೆತ್ತದೆ ಹೋದರೆ, ಈ ಜಾತಿ-ವರ್ಗ ವ್ಯವಸ್ಥೆ ನಶಿಸಿ,ಸಮಾನ ಸಮಾಜ ನಿರ್ಮಾಣವಾಗುವುದು ದೂರದ ಮಾತಾಗಿ ಬಿಡುತ್ತದೆ.

ಪರಿಸ್ಥಿತಿ ಹೀಗಿರುವಾಗ, ಈ ಸಮಾಜಕ್ಕೆ ಮೀಸಲಾತಿಯ ಅಗತ್ಯ ಇದೆಯೋ? ಇಲ್ಲವೋ? ನೀವೇ ಹೇಳಿ.

Writer - -ವಿಕಾಸ್ ಪುಟ್ಟರಾಜು, ಮಂಡ್ಯ

contributor

Editor - -ವಿಕಾಸ್ ಪುಟ್ಟರಾಜು, ಮಂಡ್ಯ

contributor

Similar News