ಕೇಂದ್ರದ ‘‘ಸ್ಮಾರ್ಟ್ ಸಿಟಿ’’ಯಲ್ಲಿ ಬಡವರಿಗೆ ಜಾಗವಿಲ್ಲ !

Update: 2017-06-16 08:25 GMT

ಹೊಸದಿಲ್ಲಿ, ಜೂ.16: ಭಾರತದ ನಗರಗಳನ್ನು ಮೇಲ್ದರ್ಜೆಗೇರಿಸುವ ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯು ಬಡವರು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಮತ್ತಷ್ಟು ಬದಿಗೆ ಸರಿಸುವುದಲ್ಲದೆ ಕೊಳಚೆಗೇರಿಗಳ ಒಕ್ಕಲೆಬ್ಬಿಸುವಿಕೆಗೂ ಕಾರಣವಾಗಲಿದೆ. ಇದಲ್ಲದೆ, ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಗಳಿಗೆ ವಲಸೆ ಬರುವುದನ್ನು ತಡೆಯುವ ಕಾರ್ಯಕ್ಕೆ ಸಹಕಾರಿಯಾಗದು ಎಂದು ಹೌಸಿಂಗ್ ಆ್ಯಂಡ್ ಲ್ಯಾಂಡ್ ರೈಟ್ಸ್ ನೆಟ್ವರ್ಕ್ ಇಂಡಿಯಾ ವರದಿಯೊಂದು ತಿಳಿಸಿದೆ.

ಈ ಸ್ಮಾರ್ಟ್ ಸಿಟಿ ಯೋಜನೆಯನ್ವಯ 100 ನಗರಗಳನ್ನು 2020ರೊಳಗಾಗಿ ಆಧುನೀಕರಣಗೊಳಿಸಿ ಅವುಗಳಿಗೆ ಹೈ ಸ್ಪೀಡ್ ಇಂಟರ್ನೆಟ್, ಸತತ ವಿದ್ಯುತ್ ಮತ್ತು ನೀರು ಸರಬರಾಜು ಮತ್ತು ವ್ಯವಸ್ಥಿತ ಸಾರ್ವಜನಿಕ ಸಾರಿಗೆ ಹಾಗೂ ಯುರೋಪ್ ನಗರಗಳಿಗೆ ಸರಿಸಮನಾದ ಜೀವನ ಮಟ್ಟವೊದಗಿಸುವ ಉದ್ದೇಶವಿದೆ. ಆದರೆ ಈ 7.5 ಬಿಲಿಯನ್ ಡಾಲರ್ ಯೋಜನೆ ಬಡ ವರ್ಗಗಳ ಅಗತ್ಯತೆಗಳ ಬಗ್ಗೆ ಗಮನ ಹರಿಸಿಲ್ಲ. ಅಲ್ಲದೆ ಅಲ್ಪಸಂಖ್ಯಾತರ, ನಗರ ಪ್ರದೇಶಗಳ ವಲಸಿಗರ ಹಿತಾಸಕ್ತಿಗಳನ್ನೂ ಗಮನದಲ್ಲಿರಿಸಿಲ್ಲ ಎಂದು ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

ಈ ಸ್ಮಾರ್ಟ್ ಸಿಟಿ ಯೋಜನೆಗಾಗಿ ಈಗಾಗಲೇ ಇಂಧೋರ್, ಭುವನೇಶ್ವರ್, ದಿಲ್ಲಿ ಮತ್ತು ಕೊಚ್ಚಿ ನಗರಗಳಲ್ಲಿ ಕೊಳಚೆಗೇರಿಗಳ ಜನರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಅವರಿಗೆ ಯಾವುದೇ ಪರಿಹಾರ ಯಾ ಪರ್ಯಾಯ ವಸತಿ ವ್ಯವಸ್ಥೆ ಮಾಡಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೇಂದ್ರೀಯ ವಾಣಿಜ್ಯ ಜಿಲ್ಲೆಗಳು ಹಾಗೂ ಮೆಟ್ರೋ ನಿರ್ಮಾಣಗಳು ಸಾವಿರಾರು ಜನರನ್ನು ನಿರ್ಗತಿಕರನ್ನಾಗಿಸುವುದು ಎಂದೂ ವರದಿ ತಿಳಿಸಿದೆ.
‘‘ಸ್ಮಾರ್ಟ್ ಸಿಟಿ ಮಾದರಿಯನ್ನು ಪುನರ್ ಪರಿಶೀಲಿಸುವ ಅಗತ್ಯವಿದ್ದು, ಈಗಿನ ನಗರ ಪ್ರದೇಶಗಳಲ್ಲಿರುವ ಬಡವರ, ನಿರ್ಗತಿಕರ, ನಿರುದ್ಯೋಗಿಗಳ ಹಿತಾಸಕ್ತಿಯನ್ನು ಗಮನಿಸಿ ಈ ಕ್ರಮ ಕೈಗೊಳ್ಳಬೇಕು’’ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶಿವಾನಿ ಚೌಧುರಿ ಹೇಳುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News