ಶೈಕ್ಷಣಿಕ ಸ್ವಾಯತ್ತೆ ಕೊನೆಗೊಂಡಿದೆ, ಇನ್ನು ಅನುದಾನವೂ ಕೊನೆಗೊಳ್ಳುತ್ತದೆಯೇ?

Update: 2017-06-16 18:28 GMT

ಕೋರ್ಸ್‌ಗಳಿಗೆ ತಾವೇ ಸ್ವತಹ ಹಣ ಒದಗಿಸಿಕೊಳ್ಳಬೇಕು (ಸೆಲ್ಫ್ ಫೈನಾನ್ಸಿಂಗ್) ಎಂಬುದು ಶುಲ್ಕಗಳ ಏರಿಕೆಗೆ, ತಾತ್ಕಾಲಿಕ ನೇಮಕಾತಿಗಳಿಗೆ ದಾರಿಯಾಗಬಹುದೆಂದು ಉನ್ನತ (ಟಾಪ್) ವಿಶ್ವವಿದ್ಯಾನಿಲಯಗಳ ಶಿಕ್ಷಕರು ಆತಂಕಿತರಾಗಿದ್ದಾರೆ.


ವಿಶ್ವವಿದ್ಯಾನಿಲಯಗಳ ಯಾದಿಯಲ್ಲಿ ಮೇಲಿನ ಸ್ಥಾನದಲ್ಲಿರುವುದು ಅಷ್ಟೇನೂ ಒಳ್ಳೆಯ ಸಂಗತಿಯಲ್ಲ ಎಂದು ಭಾರತದ ಅತ್ಯುತ್ತಮವಾದ ಕೆಲವು ಟಾಪ್ ವಿಶ್ವವಿದ್ಯಾನಿಲಯಗಳ ಶಿಕ್ಷಕರಿಗೆ ಅನ್ನಿಸತೊಡಗಿದೆ. ಯಾಕೆಂದರೆ ವಿಶ್ವವಿದ್ಯಾನಿಲಯಗಳ ಗುಣಮಟ್ಟ ಅಳೆಯುವ ಯಾದಿಯಲ್ಲಿ ಮೇಲಿನ ಸ್ಥಾನದಲ್ಲಿರುವುದು, ಹೆಚ್ಚಿನ ಅಂಕ ಗಳಿಸುವುದು ಎಂದರೆ ಈಗ ಸರಕಾರದ ಆರ್ಥಿಕ ನೆರವನ್ನು ಕಳೆದುಕೊಂಡು, ತಮ್ಮ ಚಟುವಟಿಕೆಗಳ ಕಾರ್ಯಕ್ರಮಗಳ ವಿಸ್ತರಣೆಗಾಗಿ ಖಾಸಗಿ ಹಣಕಾಸಿನ ಮೇಲೆ ಹೆಚ್ಚು ಹೆಚ್ಚು ಅವಲಂಬಿಸುವುದು ಎಂದು ಅರ್ಥವಾಗಬಹುದು.

ಜೂನ್ 2ರಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ‘ಶ್ರೇಣೀಕೃತ ಸ್ವಾಯತ್ತೆ’ಯ ವಿವರಗಳನ್ನು ವ್ಯಾಖ್ಯಾನಿಸುವ ಕರಡು ನಿಯಮಗಳನು ್ನಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತು. ಇಂತಹ ಸ್ವಾಯತ್ತೆ ನೀಡುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ವಿಶ್ವವಿದ್ಯಾನಿಲಯಗಳಿಗೆ ಕಳೆದ ಫೆಬ್ರವರಿಯಲ್ಲಿ ಆಶ್ವಾಸನೆ ನೀಡಿದ್ದರು. ಕರಡು ನೀತಿಯ ಪ್ರಕಾರ, ಸರಕಾರ ವಿವಿ ಗಳನ್ನು ಮೂರು ವರ್ಗಗಳಾಗಿ (ಅವುಗಳ ಸಾಧನೆಯ ಆಧಾರದಲ್ಲಿ) ವಿಂಗಡಿಸಲಾಗುತ್ತದೆ ಮತ್ತು ಅವುಗಳಿಗೆ ವಿವಿಧ ರೀತಿಯ ಸ್ವಾಯತ್ತೆ ನೀಡಲಾಗುತ್ತದೆ. ಸ್ವತಂತ್ರವಾಗಿ ಪಠ್ಯಕ್ರಮವನ್ನು ರಚಿಸುವ ಕೋರ್ಸ್‌ಗಳ ಚೌಕಟ್ಟನ್ನು ನಿರ್ಧರಿಸುವ ಹಾಗೂ ಪ್ರವೇಶಾತಿ ನಿಯಮಗಳನ್ನು ರೂಪಿಸುವ ಒಂದು ವಿಶ್ವವಿದ್ಯಾನಿಲಯದ ಅಧಿಕಾರಗಳನ್ನು ಮೊಟಕುಗೊಳಿಸುವ ನಿಯಮಗಳನ್ನು ಯುಜಿಸಿ ಇತ್ತೀಚೆಗೆ ಜಾರಿಗೆ ತಂದಿದೆ. ಈ ಸ್ವಾತಂತ್ರಗಳನ್ನು ಮರಳಿ ನೀಡುವ ಬದಲು ಕರಡು ನಿಯಮಗಳು ಹಣಕಾಸು ಸ್ವಾಯತ್ತೆಗೆ, ಅಂದರೆ ಸರಕಾರಿ ಸಂಸ್ಥೆಗಳನ್ನು ಸರಕಾರದ ಹಣಕಾಸು ನೆರವಿನಿಂದ ದೂರ ತಳ್ಳುವುದಕ್ಕೆ ಒತ್ತು ನೀಡುತ್ತವೆ.

ಉದಾಹರಣೆಗೆ ಟಾಪ್ ಕೆಟಗರಿಗೆ ಸೇರುವ ವಿಶ್ವವಿದ್ಯಾನಿಲಯಗಳು, ಸರಕಾರದ ಅನುಮತಿ ಪಡೆಯದೆ ಹೊಸ ಕೋರ್ಸ್‌ಗಳನ್ನು ಹಾಗೂ ವಿಭಾಗಗಳನ್ನು ತೆರೆಯಬಹುದು. ಆದರೆ ಇದನ್ನು ‘ಸ್ವ ಹಣಕಾಸು’ ನೆಲೆಯಲ್ಲಿ ಮಾಡಬೇಕು, ಅಂದರೆ ಖಾಸಗಿ ಅನುದಾನ ಅಥವಾ ಶುಲ್ಕಗಳಿಂದ ಬರುವ ಆದಾಯದಿಂದ ಮಾಡಬೇಕು.

ಮೂರು ಕೆಟಗರಿಗಳು

ಸಂಸ್ಥೆಯೊಂದರ ಸಾಧನೆ, ಕಾರ್ಯಕ್ಷಮತೆಯನ್ನಾಧರಿಸಿ ವಿವಿಗಳ ವರ್ಗೀಕರಣ ಮಾಡಲಾಗುತ್ತದೆ. ಇದು ಒಂದು ವಿಶ್ವವಿದ್ಯಾನಿಲಯವು ನ್ಯಾಕ್(ನ್ಯಾಷನಲ್ ಅಸೆಸ್‌ಮೆಂಟ್ ಆ್ಯಂಡ್ ಅಕ್ರೆಡಿಷನ್ ಕೌನ್ಸಿಲ್) ವೌಲ್ಯಮಾಪನದಲ್ಲಿ ಪಡೆದಿರುವ ಗ್ರೇಡ್ ಅನ್ನು ಅವಲಂಬಿಸಿರುತ್ತದೆ. ನ್ಯಾಕ್ ಹಲವು ವಿಷಯಗಳನ್ನು, ಸಾಧನೆಗಳನ್ನು ಪರಿಗಣಿಸಿ ನಾಲ್ಕು ಅಂಕಗಳಲ್ಲಿ ಇಂತಿಷ್ಟು ಅಂಕಗಳನ್ನು ನೀಡುತ್ತದೆ. 3.5 ಅಥವಾ ಇದಕ್ಕಿಂತ ಹೆಚ್ಚು ಅಂಕ ಗಳಿಸುವ ವಿವಿಗಳು ಟಾಪ್ ಕೆಟಗರಿಗೆ ಸೇರುತ್ತವೆ ಅಥವಾ 2015ರ ಸೆಪ್ಟಂಬರ್‌ನಲ್ಲಿ ಸರಕಾರ ಜಾರಿಗೆ ತಂದ ನ್ಯಾಷನಲ್ ಇನ್ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಮ್‌ವರ್ಕ್ ನಲ್ಲಿ ಕನಿಷ್ಠ ಎರಡು ವರ್ಷಗಳವರೆಗೆ ಟಾಪ್ 50 ಸ್ಥಾನ ಪಡೆದ ವಿವಿಗಳೂ ಟಾಪ್ ಕೆಟಗರಿಯಲ್ಲಿ ಸ್ಥಾನ ಪಡೆಯುತ್ತವೆ. 3 ಮತ್ತು 3.4 ಅಂಕಗಳು ಅಥವಾ ಟಾಪ್ 51 ರಿಂದ 100 ವಿವಿಗಳ ಸ್ಥಾನ ಪಡೆದ ವಿವಿಗಳು ಕೆಟಗರಿ ಎರಡಕ್ಕೂ, ಉಳಿದ ವಿವಿಗಳು ಕೆಟಗರಿ 3ಕ್ಕೂ ಸೇರುತ್ತವೆ.

‘ಸ್ವ ಹಣಕಾಸು ವಿಧಾನ’ 

ಮೊದಲ ಎರಡು ಕೆಟಗರಿಗಳಿಗೆ ಸೇರುವ ವಿವಿಗಳಿಗೆ ದೊರಕುವ ಸ್ವಾತಂತ್ರಗಳ ಪಟ್ಟಿ ಶಿಕ್ಷಕರ ಭಾರೀ ಆತಂಕಕ್ಕೆ ಕಾರಣವಾಗಿದೆ. ಹೊಸ ನಿಯಮಗಳ ಪ್ರಕಾರ ಈ ವಿವಿಗಳು ಕೌಶಲ (ಸ್ಕಿಲ್) ಕೋರ್ಸ್‌ಗಳನ್ನು ಹಾಗೂ ಸಂಶೋಧನಾ ಪಾರ್ಕ್‌ಗಳನ್ನು ಆರಂಭಿಸಬಹುದು; ವಿದೇಶಿ ಶಿಕ್ಷಕರನ್ನು ನೇಮಿಸಿಕೊಳ್ಳಬಹುದು; ಮತ್ತು ‘ಪ್ರತಿಭಾವಂತ ಶಿಕ್ಷಕರನ್ನು ಆಕರ್ಷಿಸಲು ಒಂದು ಪ್ರೋತ್ಸಾಹಕ ಚೌಕಟ್ಟನ್ನು’ ನಿರ್ಮಿಸಬಹುದು. ಇವೆಲ್ಲವೂ ಸ್ವತಂತ್ರವಾಗಿ ದೊರಕಿಸಿಕೊಳ್ಳುವ ಸಂಪನ್ಮೂಲಗಳಿಂದ ಆಗಬೇಕು. ‘‘ಅಂದರೆ ಇನ್ನು ಮುಂದೆ ಸಾರ್ವಜನಿಕ/ ಸರಕಾರಿ ಸಂಸ್ಥೆಗಳು ಆರ್ಥಿಕ ನೆರವಿಗಾಗಿ ಸರಕಾರದ ಕಡೆ ನೋಡುವಂತಿಲ್ಲ ಎಂಬುದೇ ಇದರ ಅರ್ಥವೆಂದು ಶಿಕ್ಷಕರು ಇದನ್ನು ಅರ್ಥೈಸಿದ್ದಾರೆ’’ ಎನ್ನುತ್ತಾರೆ ದಿಲ್ಲಿ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ಝಾ.

ಇತರ ಮೂಲಗಳಿಂದ ಸಂಪನ್ಮೂಲಗಳನ್ನು ಪಡೆಯುವಂತೆ ಒತ್ತಡ ಹೇರಿದಾಗ ವೆಚ್ಚಗಳನ್ನು ಕಡಿಮೆ ಮಾಡುವುದಕ್ಕಾಗಿ ವಿವಿಗಳು ಹೆಚ್ಚು ಹೆಚ್ಚು ತಾತ್ಕಾಲಿಕ ನೇಮಕಾತಿಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟ ಹಾಗೂ ಕಾರ್ಯಪಡೆಯ ಮೇಲೆ ಶಾಶ್ವತವಾದ ನೇತ್ಯಾತ್ಮಕ ಪರಿಣಾಮಗಳಾಗುತ್ತವೆ. ‘‘ವಿಶ್ವವಿದ್ಯಾನಿಲಯಗಳು ಸಂಪನ್ಮೂಲಗಳಿಗಾಗಿ ಶುಲ್ಕ ಹೆಚ್ಚಿಸುವುದು ಒಂದು ಆಯ್ಕೆಯಲ್ಲ. ಹಾಗೆ ಮಾಡಿದಾಗ ದುರ್ಬಲ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ.

ಒಂದು ವರ್ಷಕ್ಕೆ 10,000 ದಿಂದ 15,000 ದ ವರೆಗೆ ಶುಲ್ಕ ವಿಧಿಸುವ ಬದಲು ವಿವಿಯು ತಾನೇ ಸಂಪನ್ಮೂಲ ಸಂಗ್ರಹಿಸಬೇಕೆಂದಾಗ, ಸುಮಾರು 1.5 ಲಕ್ಷ ರೂ ಶುಲ್ಕ ವಿಧಿಸಬೇಕಾಗುತ್ತದೆ. ಆಗ ಶ್ರೀಮಂತರಿಗೆ ಮಾತ್ರ ವಿವಿಯೊಳಗೆ ಪ್ರವೇಶ ಸಿಗುತ್ತದೆ’’ ಎಂದಿದ್ದಾರೆ ಆಂಧ್ರ ವಿವಿಯ ರಿಜಿಸ್ಟ್ರಾರ್ ವಿ. ಉಮಾಮಹೇಶ್ವರ ರಾವ್.

ಎರಡು ರೀತಿಯ ನಿರ್ಬಂಧ
ನ್ಯಾಕ್ ವೌಲ್ಯಮಾಪನ, ವಿವಿಗಳಿಗೆ ರ್ಯಾಂಕ್ ನೀಡಿಕೆಗೂ ಅನುದಾನಕ್ಕೂ ಸಂಬಂಧ ಕಲ್ಪಿಸುವ ಕೇಂದ್ರ ಸರಕಾರದ ಸೂಚನೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಪಶ್ಚಿಮ ಬಂಗಾಲ ವಿವಿ ಶಿಕ್ಷಕರ ಸಂಘದ ಸುಭದಾಯ್ ದಾಸಗುಪ್ತ ಹೇಳುವಂತೆ ‘‘ ಈ ವೌಲ್ಯಮಾಪನಗಳು ಪಾರದರ್ಶಕವಲ್ಲ’’. ಆದರೆ ಸರಕಾರದ ಪ್ರಸ್ತಾಪ (ಪ್ರೊಪೋಸಲ್) ಚಾನೆಲ್‌ಗಳ ಮೂಲಕ ಸಾಕಷ್ಟು ಸಂಪನ್ಮೂಲ ಪಡೆಯಲಾಗದ, ಹಣದ ಕೊರತೆಯಿರುವ ವಿವಿ ಗಳಿಗೆ ಅನಿವಾರ್ಯವಾಗಿದೆ. ವೌಲ್ಯಮಾಪನದಲ್ಲಿ ನಿರೀಕ್ಷಿತ ರ್ಯಾಂಕ್ ಗಳಿಸದ ವಿವಿಗಳಿಗೆ ಸರಕಾರದ ಸಹಾಯಧನ ಮುಂದುವರಿಯುವ ಖಚಿತತೆ ಇಲ್ಲವಾದ್ದರಿಂದ ಅವು ಸ್ವ-ಹಣಕಾಸು ಪೂರೈಕೆಯ ಮೂಲಕ ಕೋರ್ಸ್‌ಗಳನ್ನು ನಡೆಸುವುದು ಅನಿವಾರ್ಯವಾಗುತ್ತಿದೆ.

ಕೆಲವು ವಿಭಾಗಗಳಿಗೆ ತೊಂದರೆಯಾಗಲಿದೆ. ಖಾಸಗಿ ರಂಗದ ಭಾಗವಹಿಸುವಿಕೆಯಿಂದ ಕೆಲವು ಸಂಸ್ಥೆಗಳಿಗೆ ಲಾಭವಾಗುತ್ತದೆ. ಉದಾಹರಣೆಗೆ ಜಾಧವ್‌ಪುರ ವಿ.ವಿಯ ಫಾರ್ಮಸ್ಯೂಟಿಕಲ್ ಟೆಕ್ನಾಲಜಿ ವಿಭಾಗವು ಔಷಧ ಕಂಪೆನಿಗಳಿಗೆ ಔಷಧಿಗಳನ್ನು ಪರೀಕ್ಷಿಸುವ ಕೆಲಸ ಮಾಡಿಕೊಡುವ ಮೂಲಕ ಸಾಕಷ್ಟು ಸಂಪನ್ಮೂಲ ಗಳಿಸಿದೆ. ಹಾಗೆಯೇ ಐಐಟಿ ಗಳು ಕೂಡಾ ಖಾಸಗಿ ಕಂಪೆನಿಗಳು ನೀಡುವ ಹಣದಿಂದ ವಿದ್ಯಾರ್ಥಿ ವೇತನ ನೀಡುತ್ತವೆ. ಉಪನ್ಯಾಸ ಮಾಲಿಕೆಗಳನ್ನು ನಡೆಸುತ್ತವೆ. ಆದರೆ ಖಾಸಗಿ ರಂಗವು ತಾಂತ್ರಿಕ ವಿಭಾಗಗಳಿಗೆ ತನಗೆ ಬೇಕಾದುದಕ್ಕೆ ಮಾತ್ರ ಹಣ ವಿನಿಯೋಗಿಸುತ್ತದೆ. ಅಂದರೆ ಶುಧ್ಧ ವಿಜ್ಞಾನ, ಥಿಯರಿಟಿಕಲ್ ವಿಜ್ಞಾನಗಳು ಸರಕಾರದ ಸಹಾಯ ಧನವಿಲ್ಲದೆ ತೀರಾ ಅವಗಣನೆಗೆ ಗುರಿಯಾಗುತ್ತವೆ. ಕೆಟಗರಿ 2 ಮತ್ತು ಕೆಟಗರಿ 3 ವಿಭಾಗಕ್ಕೆ ಸೇರಿದ ಸಂಸ್ಥೆಗಳ ಭವಿಷ್ಯದ ಬಗ್ಗೆ ಕರಡು ನೀತಿಯಲ್ಲಿ ವಿವರಗಳಿಲ್ಲದಿರುವುದು ಕೂಡಾ ಶಿಕ್ಷಣ ತಜ್ಞರನ್ನು ಆತಂಕಕ್ಕೀಡು ಮಾಡಿದೆ. 

ಕೃಪೆ: scroll.in

Writer - ಶ್ರೇಯಾ ರಾಯ್ ಚೌಧುರಿ

contributor

Editor - ಶ್ರೇಯಾ ರಾಯ್ ಚೌಧುರಿ

contributor

Similar News