ಬಾಂಗ್ಲಾದೇಶ ಪ್ರವಾಸ ದೃಢಪಡಿಸಿದ ಆಸ್ಟ್ರೇಲಿಯ

Update: 2017-06-16 18:34 GMT

ಸಿಡ್ನಿ, ಜೂ.16: ಭದ್ರತಾ ಭೀತಿಯಿಂದಾಗಿ ಎರಡು ವರ್ಷಗಳ ಹಿಂದೆ ರದ್ದಾಗಿದ್ದ ಬಾಂಗ್ಲಾದೇಶದ ಟೆಸ್ಟ್ ಪ್ರವಾಸವನ್ನು ಪುನರಾರಂಭಿಸುವುದಾಗಿ ಆಸ್ಟ್ರೇಲಿಯ ಶುಕ್ರವಾರ ಘೋಷಿಸಿದೆ.

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ 13 ಸದಸ್ಯರನ್ನು ಒಳಗೊಂಡ ಆಸ್ಟ್ರೇಲಿಯ ತಂಡವನ್ನು ಪ್ರಕಟಿಸಲಾಗಿದ್ದು, ಮಾರ್ಚ್‌ನಲ್ಲಿ ಕಾಲುನೋವಿಗೆ ಒಳಗಾಗಿದ್ದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್‌ಗೆ ವಿಶ್ರಾಂತಿ ನೀಡಲಾಗಿದೆ. ಭಾರತ ವಿರುದ್ಧ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಏಕದಿನ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧ ವರ್ಷಾಂತ್ಯದಲ್ಲಿ ನಡೆಯುವ ಆ್ಯಶಸ್ ಸರಣಿಯ ಹಿನ್ನೆಲೆಯಲ್ಲಿ ಸ್ಟಾರ್ಕ್‌ಗೆ ವಿಶ್ರಾಂತಿ ನೀಡಲಾಗಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಾಗೂ ಅಲ್ಲಿನ ಸರಕಾರದಿಂದ ಭದ್ರತಾ ಭರವಸೆ ಲಭಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಸರಕಾರಿ ಏಜೆನ್ಸಿಗಳು ಹಾಗೂ ನಮ್ಮದೇ ಭದ್ರತಾ ಸಲಹೆಗಾರರ ಸಲಹೆ ಪಡೆಯುತ್ತೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.

2015ರಲ್ಲಿ ಆಸ್ಟ್ರೇಲಿಯ ತಂಡ ಬಾಂಗ್ಲಾಕ್ಕೆ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ ಬಾಂಗ್ಲಾದಲ್ಲಿ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಆಸೀಸ್ ತನ್ನ ಕ್ರಿಕೆಟ್ ಪ್ರವಾಸವನ್ನು ರದ್ದುಪಡಿಸಿತ್ತು.

ಆಸ್ಟ್ರೇಲಿಯ ಆಗಸ್ಟ್ 18 ರಂದು ಬಾಂಗ್ಲಾಕ್ಕೆ ತೆರಳಲಿದ್ದು, ಎರಡು ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಢಾಕಾ ಹಾಗೂ ಚಿತ್ತಗಾಂಗ್‌ನಲ್ಲಿ ಆ.27 ಹಾಗೂ ಸೆಪ್ಟಂಬರ್ 4 ರಂದು ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಆಸ್ಟ್ರೇಲಿಯ: ಸ್ಟೀವನ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಆಶ್ಟನ್ ಅಗರ್, ಹಿಲ್ಟನ್ ಕಾರ್ಟ್‌ರೈಟ್, ಪ್ಯಾಟ್ ಕಮಿನ್ಸ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹೇಝಲ್‌ವುಡ್, ಉಸ್ಮಾನ್ ಖ್ವಾಜಾ, ನಥಾನ್ ಲಿಯೊನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೇಮ್ಸ್ ಪ್ಯಾಟಿನ್ಸನ್, ಮ್ಯಾಥ್ಯೂ ರೆನ್‌ಶಾ ಹಾಗೂ ಮ್ಯಾಥ್ಯೂ ವೇಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News