ಏರ್‌ಇಂಡಿಯಾ ಸಿಬ್ಬಂದಿಗೆ ವಸ್ತ್ರಸಂಹಿತೆ ಕಡ್ಡಾಯ

Update: 2017-06-17 03:57 GMT

ಹೊಸದಿಲ್ಲಿ, ಜೂ. 17: ಏರ್‌ಇಂಡಿಯಾ ಸಿಬ್ಬಂದಿ ಕುರ್ತಾ- ಪೈಜಾಮಾ ಮತ್ತು ಸ್ಲಿಪ್ಪರ್ ಧರಿಸಿ ವಿಮಾನಯಾನ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ತನ್ನೆಲ್ಲ ಸಿಬ್ಬಂದಿಗೆ ವಸ್ತ್ರಸಂಹಿತೆ ಪಾಲಿಸುವಂತೆ ಏರ್ ಇಂಡಿಯಾ ಆದೇಶ ನೀಡಿದೆ. ಪ್ರಯಾಣದ ವೇಳೆ ಸೂಕ್ತವಾದ ಬಟ್ಟೆ ಧರಿಸಿ, ಶಿಷ್ಟಾಚಾರ ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಏರ್‌ಇಂಡಿಯಾ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಶ್ವನಿ ಲೋಹಾನಿ ಈ ಸಂಬಂಧ ಆದೇಶ ಹೊರಡಿಸಿದ್ದು, "ಸಿಬ್ಬಂದಿ ರಜೆಯಲ್ಲಿದ್ದರೂ, ಕರ್ತವ್ಯದಲ್ಲಿದ್ದರೂ, ಪ್ರಯಾಣದ ವೇಳೆ ಸೂಕ್ತ ವಸ್ತ್ರಸಂಹಿತೆ ಪಾಲಿಸಬೇಕು" ಎಂದು ಸೂಚಿಸಿದ್ದಾರೆ.

ಏರ್‌ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಅಂತಾರಾಷ್ಟ್ರೀಯ ವಿಮಾನದಲ್ಲಿ ಕುರ್ತಾ- ಪೈಜಾಮಾ ಧರಿಸಿ, ಗಗನಸಖಿಯರ ಜತೆ ಜೋರಾಗಿ ಮಾತನಾಡುತ್ತಿದ್ದುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಈ ಬಗ್ಗೆ ಮತ್ತಷ್ಟು ತಪಾಸಣೆ ಕೈಗೊಂಡಾಗ, ಬಹುತೇಕ ಸಿಬ್ಬಂದಿ ಅಧಿಕೃತ ಕರ್ತವ್ಯದ ಅವಧಿಯಲ್ಲಿ ಕೂಡಾ ಕ್ಯಾಶುವಲ್ಸ್ ಮತ್ತು ಸ್ಲಿಪ್ಪರ್ ಧರಿಸಿಕೊಂಡು ಬರುತ್ತಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

"ಏರ್‌ಇಂಡಿಯಾ ಸಿಬ್ಬಂದಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ತವ್ಯದಲ್ಲಿರುವಾಗ ಅಗತ್ಯವಿರುವಷ್ಟು ಪ್ರಯಾಣ ಮಾಡಬಹುದು. ವರ್ಷಕ್ಕೆ ಒಮ್ಮೆ ವೈಯಕ್ತಿಕ ಓಡಾಟಕ್ಕೆ ಉಚಿತ ಪಾಸ್ ಪಡೆಯುತ್ತಾರೆ. ಆದಾಗ್ಯೂ ಅವರು ಏರ್‌ಲೈನ್ಸ್ ಅನ್ನು ಪ್ರತಿನಿಧಿಸುವುದರಿಂದ, ಸಿಬ್ಬಂದಿ ಸೂಕ್ತವಾದ ಬಟ್ಟೆ ಧರಿಸಿ, ಸರಿಯಾಗಿ ವರ್ತಿಸಬೇಕು. ಬಹುತೇಕ ಮಂದಿ ವಸ್ತ್ರಸಂಹಿತೆ ಪಾಲಿಸುವುದಿಲ್ಲ ಎನ್ನುವುದು ಪತ್ತೆಯಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನು ಕಟ್ಟುನಿಟ್ಟುಗೊಳಿಸುವ ಸಲುವಾಗಿ ದಿಢೀರ್ ತಪಾಸಣೆ ಕೈಗೊಳ್ಳಲೂ ನಿರ್ಧರಿಸಲಾಗಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News