ಸ್ವಾತಂತ್ರ ಪೂರ್ವದಲ್ಲಿ ಪ್ರೀತಿ ವಿಶ್ವಾಸಕ್ಕೆ ಕೊರತೆ ಇರಲಿಲ್ಲ: ಟಿ.ಆರ್.ಮಹದೇವಯ್ಯ

Update: 2017-06-17 14:52 GMT

ಬೆಂಗಳೂರು, ಜೂ.17: ಸ್ವಾತಂತ್ರ ಪೂರ್ವದ ಗ್ರಾಮಾಂತರ ಪ್ರದೇಶದಲ್ಲಿ ಬಸ್ ವ್ಯವಸ್ಥೆ, ವೃತ್ತ ಪತ್ರಿಕೆಗಳಿಲ್ಲದಿರಬಹುದು. ಆದರೆ, ಪ್ರೀತಿ ವಿಶ್ವಾಸಕ್ಕೆ ಕೊರತೆ ಇರಲಿಲ್ಲ ಎಂದು ಹಿರಿಯ ಸಾಹಿತಿ ಟಿ.ಆರ್.ಮಹದೇವಯ್ಯ ನೆನಪು ಮಾಡಿಕೊಂಡರು.

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಟ್ಟಿರುವ ಪಾಡು ಹೇಳತೀರದಾಗಿದೆ. ಈ ಕಷ್ಟಗಳ ಮಧ್ಯೆದಲ್ಲಿಯೂ ಎಲ್ಲರ ಮನಸುಗಳಲ್ಲಿಯೂ ಪ್ರೀತಿ ವಿಶ್ವಾಸಗಳು ಮನೆ ಮಾಡಿರುತ್ತಿತ್ತು ಎಂದು ತಿಳಿಸಿದರು.

1934ರಲ್ಲಿ ತಿಪ್ಪೂರಿನಲ್ಲಿ ಹುಟ್ಟಿದ ನಾನು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದೆ. ತದನಂತ ಹೈಸ್ಕೂಲ್‌ಗೆ ಸಂಬಂಧಿಕರ ಮನೆಯಲ್ಲಿ ಉಳಿದು, ಪ್ರಥಮ ದರ್ಜೆಯಲ್ಲಿ 10ನೆ ತರಗತಿ ಉತ್ತೀರ್ಣನಾದೆ. ಆದರೆ, ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ಹಣ ಇಲ್ಲದ ಕಾರಣ ಒಂದು ವರ್ಷ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡೆ. ಕೃಷಿಯಲ್ಲಿ ಬಂದ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡಿ ಕಾಲೇಜಿಗೆ ಸೇರಿದೆ ಎಂದು ತಮ್ಮ ಶೈಕ್ಷಣಿಕ ಜೀವನವನ್ನು ಬಿಚ್ಚಿಟ್ಟರು.

ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಉಪನ್ಯಾಸಕ ವೃತ್ತಿ ಪ್ರಾರಂಭಿಸಿದ ನಂತರ ಕನ್ನಡ ಸಾಹಿತ್ಯ ಪರಿಷತ್‌ನ ನಿಘಂಟು ಯೋಜನೆಯಲ್ಲಿ ತೊಡಗಿಸಿಕೊಳ್ಳುವಂತಹ ಸುವರ್ಣ ಅವಕಾಶ ಲಭಿಸಿತ್ತು. ಹಿರಿಯ ವಿದ್ವಾಂಸರಾದ ತೀ.ನಂ.ಶ್ರೀಕಂಠಯ, ಲಕ್ಷ್ಮಿ ನಾರಾಯಣ ಭಟ್ ಸೇರಿದಂತೆ ಹಲವು ವಿದ್ವಾಂಸರ ಜೊತೆ ಕೆಲಸ ಮಾಡಿದ್ದು ನನ್ನ ಅವಿಸ್ಮರಣೀಯ ದಿನಗಳಾಗಿದ್ದವು ಎಂದು ಅವರು ಸ್ಮರಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್‌ನ ನಿಘಂಟು ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಲೆ ಸಂಜೆ ಕಾಲೇಜಿನಲ್ಲಿ ಉಪನ್ಯಾಸ ಮಾಡುತ್ತಿದ್ದೆ. ಹಗಲಿನಲ್ಲಿ ಕಠಿಣ ಕೆಲಸ ಮಾಡಿ ಸಂಜೆ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದರು. ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿಯೇ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತಿತ್ತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇವತ್ತಿನ ವಿದ್ಯಾರ್ಥಿಗಳಿಗೆ ಕಲಿಯಬೇಕೆಂಬ ಉತ್ಸಾಹ, ಶ್ರದ್ಧೆಯಿಲ್ಲ. ಉತ್ಸಾಹವಿಲ್ಲ. ವಾಮಮಾರ್ಗದ ಮೂಲಕ ಅಂಕಗಳಿಸಬಹುದೆಂದು ಹುಂಬುತನವಿರುತ್ತದೆ. ಇದರಿಂದಾಗಿ ಶಿಕ್ಷಣ ಕ್ಷೇತ್ರದ ಗುಣಮಟ್ಟ ಕುಸಿಯುತ್ತಿದೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯ ಸತ್ವದ ರುಚಿ ಗೊತ್ತಿಲ್ಲದ ಈಗಿನ ಮಾಧ್ಯಮಗಳು ಹಾಗೂ ಕೆಲವು ವೃತ್ತ ಪತ್ರಿಕೆಗಳು ಕನ್ನಡ ಪದಗಳ ಮಧ್ಯೆದಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಪದಗಳನ್ನು ಸೇರಿಸುವ ಮೂಲಕ ಕಲಬೆರಕೆ ಮಾಡುತ್ತಿದ್ದಾರೆ. ಜನ ಸಾಮಾನ್ಯರಿಗೆ ಹತ್ತಿರವಾಗಿದ್ದ ಮಾಧ್ಯಮಗಳಲ್ಲಿ ಕನ್ನಡ ವಿರೋಧಿ ನೀತಿ ಅನುಸರಿಸುವುದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಅವರು ಹೇಳಿದರು.

Writer - ಕನ್ನಡ ಭಾಷೆ

contributor

Editor - ಕನ್ನಡ ಭಾಷೆ

contributor

Similar News