ಯುಪಿ ಸಿಎಂ ಆದಿತ್ಯನಾಥ್ ಗೆ ಸುತ್ತಿಕೊಂಡ ನಗ್ನಚಿತ್ರ ವಿವಾದ

Update: 2017-06-20 04:13 GMT

ಗುವಾಹಟಿ, ಜೂ.20: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಫೇಸ್‌ಬುಕ್ ಅಕೌಂಟ್‌ನಿಂದ ಅಪ್‌ಲೋಡ್ ಆಗಿದೆ ಎನ್ನಲಾದ ನಗ್ನ ಮಹಿಳೆಯ ಚಿತ್ರ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಈ ಆದಿವಾಸಿ ಮಹಿಳೆ, ಆದಿತ್ಯನಾಥ್ ಹಾಗೂ ತೇಜಪುರ ಬಿಜೆಪಿ ಸಂಸದ ಆರ್.ಪಿ.ಶರ್ಮಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ.

ಮಂಗಳವಾರ ಅಸ್ಸಾಂನ ಬಿಸ್ವನಾಥ್ ಚರಿಯಾಲಿ ಜಿಲ್ಲಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಲಿದೆ. ಜೂನ್ 13ರಂದು ಈ ಚಿತ್ರ ಪೋಸ್ಟ್ ಆಗಿದ್ದು, ಬಿಜೆಪಿ ಹಾಗೂ ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಿಂದೂ ಮಹಿಳೆಯನ್ನು ಬೆತ್ತಲುಗೊಳಿಸಿದ್ದಾರೆ ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿದೆ. ಶರ್ಮಾ ಈ ಪೋಸ್ಟ್ ಬೆಂಬಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡಿದ್ದಾರೆ.

ಆಲ್ ಆದಿವಾಸಿ ಸ್ಟೂಡೆಂಟ್ಸ್ ಅಸೋಸಿಯೇಶನ್ ಆಫ್ ಅಸ್ಸಾಂ, ರವಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಕುಚೋದ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಸ್ಸಾಂ ಡಿಜಿಪಿ ಮುಖೇಶ್ ಸಹಾಯ್ ಹೇಳಿದ್ದಾರೆ.

ಮಹಿಳೆಯ ಬಟ್ಟೆ ಬಿಚ್ಚಿಸಿ ರಸ್ತೆಯಲ್ಲಿ ಓಡಾಡಿಸುತ್ತಿರುವ ಚಿತ್ರವನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಅಕೌಂಟ್‌ನಿಂದ ಅಪ್‌ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ಫೇಸ್‌ಬುಕ್‌ನಲ್ಲಿ ಯೋಗಿಗೆ 95 ಸಾವಿರ ಅನುಯಾಯಿಗಳಿದ್ದಾರೆ.

"ಜನರು ಈ ಚಿತ್ರವನ್ನು ಶೇರ್ ಮಾಡುವ ಮೂಲಕ ಕಾಂಗ್ರೆಸ್‌ನ ನಿಜ ಬಣ್ಣವನ್ನು ವಿಶ್ವಕ್ಕೆ ಬಯಲು ಮಾಡಬೇಕು" ಎಂದೂ ಮನವಿ ಮಾಡಿಕೊಳ್ಳಲಾಗಿದೆ ಎಂದು ’ಕ್ವಿಂಟ್’ ವರದಿ ಮಾಡಿದೆ. ಈ ಘಟನೆ ಬಂಗಾಳದಲ್ಲಿ ನಡೆದಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದ್ದು, ಯಾವಾಗ ನಡೆದಿದೆ ಎಂಬ ಬಗ್ಗೆ ಉಲ್ಲೇಖವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News