ನೋಟು ರದ್ದತಿ ಪರಿಣಾಮ: ಎಕ್ಸಿಮ್ ವ್ಯವಹಾರದ ಅಭಿವೃದ್ಧಿ ಕುಸಿತ

Update: 2017-06-20 15:21 GMT

ಮುಂಬೈ, ಜೂ.20: ನೋಟು ಅಮಾನ್ಯೀಕರಣ ಮತ್ತು ಆ ಬಳಿಕ ಬಳಕೆಯಲ್ಲಿ ಆದ ಕುಸಿತದ ಕಾರಣ , ಈ ವರ್ಷದ ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ದೇಶದ ಆಮದು-ರಫ್ತು (ಎಕ್ಸಿಮ್) ಧಾರಕ ವ್ಯವಹಾರ ಪ್ರಮಾಣದ ಅಭಿವೃದ್ಧಿಯಲಿ ಕುಸಿತವಾಗಿದೆ ಎಂದು ವರದಿಯೊಂದು ತಿಳಿಸಿದೆ.

  ಧಾರಕ ವ್ಯವಹಾರ ಪ್ರಮಾಣದ ಅಭಿವೃದ್ಧಿ ಶೇ.7ಕ್ಕೆ ಕುಸಿದಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.10ರಷ್ಟಿತ್ತು. ರಫ್ತು ಅಭಿವೃದ್ಧಿ ಪ್ರಮಾಣ ಶೇ.8ರಲ್ಲಿ ಸ್ಥಿರವಾಗಿದ್ದರೆ ಆಮದು ಅಭಿವೃದ್ಧಿ ಕಳೆದ ವರ್ಷದ ಶೇ.13ರ ಪ್ರಮಾಣದಿಂದ ಶೇ.5ಕ್ಕೆ ಕುಸಿದಿದೆ. ನೋಟು ಅಮಾನ್ಯಗೊಂಡ ಬಳಿಕ ಆಮದು ಪ್ರಮಾಣದಲ್ಲಿ ಅಲ್ಪಾವಧಿಯ ಕುಸಿತ ಆಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ವರದಿ ತಿಳಿಸಿದೆ.

 ನೋಟು ಅಮಾನ್ಯೀಕರಣದ ಬಳಿಕ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ವಸ್ತುಗಳ ಕೊರತೆಯಾದುದು ಮತ್ತು ಜಿಎಸ್‌ಟಿ(ಆಸ್ತಿ ಮತ್ತು ಸರಕು ತೆರಿಗೆ)ಯ ಬಗ್ಗೆ ಸ್ಪಷ್ಟನೆ ಇಲ್ಲದಿದ್ದುದು ಆಮದು ಪ್ರಮಾಣದ ಅಭಿವೃದ್ಧಿ ಕುಸಿಯಲು ಕಾರಣ ಎಂದು ‘ವೆಸ್ಟ್ ಸೆಂಟ್ರಲ್ ಏಶಿಯ ಟ್ರೇಡ್ಸ್ ಅಟ್ ದಿ ಕಂಟೈನರ್ ಶಿಪ್ಪಿಂಗ್ ಕಂಪೆನಿ’ ಮುಖ್ಯಸ್ಥ ಫ್ರಾಂಕ್ ಡೆನಿಸ್ ಹೇಳಿದ್ದಾರೆ.

 ಅದಾಗ್ಯೂ ಭಾರತದ ಎಕ್ಸಿಮ್(ಆಮದು-ರಫ್ತು) ವ್ಯಾಪಾರದ ಮುನ್ಸೂಚನೆ ಉತ್ತಮವಾಗಿದೆ ಮತ್ತು ನೋಟು ಅಮಾನ್ಯೀಕರಣದ ಪ್ರಭಾವ ದೂರವಾಗುವ ನಿರೀಕ್ಷೆಯಿರುವ ಕಾರಣ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಉತ್ತಮ ಬೆಳವಣಿಗೆ ನಿರೀಕ್ಷಿಸಬಹುದು ಎಂದವರು ಹೇಳಿದ್ದಾರೆ.

     ನೋಟು ಅಮಾನ್ಯೀಕರಣ ಪ್ರಕ್ರಿಯೆಯ ಬಳಿಕ ಪೀಠೋಪಕರಣ, ಇಲೆಕ್ಟ್ರಾನಿಕ್ಸ್ ವಸ್ತುಗಳು, ಅಟೊಮೊಬೈಲ್ ವಸ್ತುಗಳು ಸೇರಿದಂತೆ ನಗದು ವ್ಯವಹಾರ ಒಳಗೊಂಡಿರುವ ವಸ್ತುಗಳನ್ನು ಚೀನಾ, ಅಮೆರಿಕ, ಜರ್ಮನಿಯಿಂದ ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ತೊಂದರೆಯಾಗಿತ್ತು. ಮಧ್ಯ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಪ್ರಕ್ರಿಯೆ ನಕಾರಾತ್ಮಕ ಅಭಿವೃದ್ಧಿ ದಾಖಲಿಸಿದ್ದು , ಕೇವಲ ಶೇ.9ರಷ್ಟು ಅಭಿವೃದ್ಧಿ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.29ರಷ್ಟು ಅಭಿವೃದ್ಧಿ ದಾಖಲಾಗಿತ್ತು. ಅಲ್ಲದೆ ನೋಟು ರದ್ದತಿಯಿಂದ ರದ್ದಿ ಕಾಗದದ ಬೇಡಿಕೆ ಕೂಡಾ ಕುಸಿದಿತ್ತು ಎಂದು ವರದಿ ತಿಳಿಸಿದೆ.

 ನೋಟು ರದ್ದತಿಯ ಪರಿಣಾಮ ರಫ್ತು ವ್ಯವಹಾರ ಆಮದು ವ್ಯವಹಾರವನ್ನು ಮೀರಿಸಿತ್ತು. ದೇಶದ ನಿರ್ವಹಣೆ ಇಳಿಮುಖವಾಗಿದ್ದರೂ ಜಾಗತಿಕ ವ್ಯವಹಾರಕ್ಕೆ ಹೋಲಿಸಿದರೆ ದೇಶದ ವ್ಯವಹಾರ ನಿರ್ವಹಣೆ ಶೇ.5ರಷ್ಟು ಉತ್ತಮವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News