ಭಾರತದ ಜಿಡಿಪಿ ಮೂರು ವರ್ಷಗಳಲ್ಲೇ ಕನಿಷ್ಠಮಟ್ಟಕ್ಕೆ

Update: 2017-06-21 03:54 GMT

ಮುಂಬೈ, ಜೂ.21: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇಕಡ 6.1ರಷ್ಟಾಗಿದ್ದು, ಇದು 2014ರ ನಾಲ್ಕನೆ ತ್ರೈಮಾಸಿಕದ ಬಳಿಕ ದಾಖಲಾದ ಕನಿಷ್ಠ ಪ್ರಗತಿ ದರವಾಗಿದೆ ಎಂದು ಜಾಗತಿಕ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಫಿಚ್ ರೇಟಿಂಗ್ಸ್ ಪ್ರಕಟಿಸಿದೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಪುನಶ್ಚೇತನದ ದರ ಸುಧಾರಿಸುತ್ತಿದೆ ಎಂದೂ ಫಿಚ್ ಹೇಳಿದೆ. ಸೋಮವಾರ ಬಿಡುಗಡೆಯಾದ ಜಾಗತಿಕ ಆರ್ಥಿಕ ದೃಷ್ಟಿಕೋನ ವರದಿಯಲ್ಲಿ, "ಭಾರತದ ಜಿಡಿಪಿ ಪ್ರಗತಿ ದರ ಗಣನೀಯವಾಗಿ ಕುಂಠಿತವಾಗಿದ್ದು, 2016ರ ನಾಲ್ಕನೆ ತ್ರೈಮಾಸಿಕದಲ್ಲಿ ಶೇಕಡ 7.0ರಷ್ಟಿದ್ದ ಪ್ರಗತಿದರ 2017ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 6.1ಕ್ಕೆ ಕುಸಿದಿದೆ" ಎಂದು ಫಿಚ್ ವಿವರಿಸಿದೆ. ಈ ನಿಧಾನ ಪ್ರವೃತ್ತಿಗೆ ಆಂತರಿಕವಾಗಿ ಬೇಡಿಕೆ ಕುಸಿದಿರುವುದು ಕಾರಣ ಎಂದು ವಿಶ್ಲೇಷಿಸಿದೆ.

"ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಶೇಕಡ 86ರಷ್ಟು ಹಣವನ್ನು ಚಲಾವಣೆಯಿಂದ ವಾಪಸ್ ಪಡೆದ ಹಿನ್ನೆಲೆಯಲ್ಲಿ, ವೆಚ್ಚದ ಮೇಲೆ ವ್ಯತಿರಿಕ್ತ ಪರಿಣಾಮವಾಗಿರುವ ಸಾಧ್ಯತೆ ನಿಚ್ಚಳವಾಗಿದೆ" ಎಂದು ವಿವರಿಸಿದೆ.

ನೋಟು ರದ್ದತಿಯ ಪರಿಣಾಮಗಳು ಆರ್ಥಿಕತೆಯ ಮೇಲೆ ಇನ್ನೂ ವ್ಯಾಪಕವಾಗಿದೆ. ಅನೌಪಚಾರಿಕ ವಲಯದಲ್ಲಿ ವೆಚ್ಚ ಪ್ರವೃತ್ತಿ ತೀರಾ ಕುಂಠಿತವಾಗಿದೆ. ಬಳಕೆ ಪ್ರಗತಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 7.3ರಷ್ಟು ಕಡಿಮೆಯಾಗಿದೆ. ಇದು 2016ರ ಕೊನೆಯ ತ್ರೈಮಾಸಿಕದಲ್ಲಿ ಶೇಕಡ 11.3ರಷ್ಟಿತ್ತು. ಆತಂಕಕಾರಿ ವಿಚಾರವೆಂದರೆ, ಹೂಡಿಕೆ ಪ್ರಮಾಣ ಋಣಾತ್ಮಕ ಮಟ್ಟ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಶೇಕಡ 2.1ರಷ್ಟು ಕುಸಿದಿದೆ. ನಿರ್ಮಾಣ ಚಟುವಟಿಕೆಗಳು ಕೂಡಾ ಋಣಾತ್ಮಕ ಪ್ರಗತಿ ದಾಖಲಿಸಿವೆ. ಇತ್ತೀಚಿನ ವರ್ಷಗಳಲ್ಲಿ ಈ ಬಗೆಯ ನಿಧಾನ ಪ್ರವೃತ್ತಿ ಇದೇ ಮೊದಲು" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News