ಜನಸಂಖ್ಯೆಯಲ್ಲಿ 7 ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕುವ ಭಾರತ

Update: 2017-06-22 13:30 GMT

ವಿಶ್ವಸಂಸ್ಥೆ, ಜೂ. 22: ಇನ್ನು ಸುಮಾರು ಏಳು ವರ್ಷಗಳಲ್ಲಿ ಭಾರತದ ಜನಸಂಖ್ಯೆ ಚೀನಾದ ಜನಸಂಖ್ಯೆಯನ್ನು ಹಿಂದಿಕ್ಕಿ ಪ್ರಪಂಚದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗುತ್ತದೆ ಹಾಗೂ 2050ಕ್ಕೆ ಸ್ವಲ್ಪ ಮುನ್ನ ನೈಜೀರಿಯವು ಅಮೆರಿಕವನ್ನು ಹಿಂದೆ ಹಾಕಿ ಜಗತ್ತಿನ ಮೂರನೆ ಅತ್ಯಂತ ಜನಭರಿತ ದೇಶವಾಗುತ್ತದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಬುಧವಾರ ಹೇಳಿದೆ.

 ಜಗತ್ತಿನ ಜನಸಂಖ್ಯೆಯು ಈಗಿನ ಸುಮಾರು 760 ಕೋಟಿಯಿಂದ 2030ರ ವೇಳೆಗೆ 860 ಕೋಟಿಗೆ, 2050ರ ವೇಳೆಗೆ 980 ಕೋಟಿಗೆ ಮತ್ತು 2100ರ ವೇಳೆಗೆ 1120 ಕೋಟಿಗೆ ಏರುತ್ತದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಜನಸಂಖ್ಯೆ ವಿಭಾಗ ಸಿದ್ಧಪಡಿಸಿದ ವರದಿ ತಿಳಿಸಿದೆ.

ಪ್ರತಿ ವರ್ಷ ಜಾಗತಿಕ ಜನಸಂಖ್ಯೆಗೆ ಸುಮಾರು 8.3 ಕೋಟಿ ಜನರು ಸೇರ್ಪಡೆಯಾಗುತ್ತಿದ್ದಾರೆ ಎಂದು ಅದು ಹೇಳಿದೆ. ಜನನ ದರದಲ್ಲಿನ ಇಳಿಕೆಯು ಮುಂದುವರಿಯುತ್ತಿರುವ ಹೊರತಾಗಿಯೂ ಜನಸಂಖ್ಯೆಯಲ್ಲಿನ ಏರಿಕೆ ಮುಂದುವರಿಯುವ ನಿರೀಕ್ಷೆಯಿದೆ. ಜನನ ದರವು 1960ರ ದಶಕದ ಬಳಿಕ ನಿರಂತರವಾಗಿ ಕುಸಿಯುತ್ತಿದೆ.

ಜಗತ್ತಿನ 233 ದೇಶಗಳು ಅಥವಾ ಪ್ರದೇಶಗಳ ಜನಸಂಖ್ಯೆಗಳ ಕುರಿತ ಮಾಹಿತಿ ವರದಿಯಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಸಂಖ್ಯಾ ವಿಭಾಗದ ನಿರ್ದೇಶಕ ಜಾನ್ ವಿಲ್ಮತ್ ಹೇಳಿದರು.

ಯುರೋಪ್‌ನಲ್ಲಿ ಜನಸಂಖ್ಯೆ ಕುಸಿತ

‘‘ಆಫ್ರಿಕದ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ ಹಾಗೂ ಇಂದಿನಿಂದ 2050ರ ವರೆಗಿನ ಅವಧಿಯಲ್ಲಿ ಆಗುವ ಜಾಗತಿಕ ಜನಸಂಖ್ಯಾ ಹೆಚ್ಚಳದ ಅರ್ಧ ಭಾಗ ಈ ವಲಯದಲ್ಲಿಯೇ ಆಗುತ್ತದೆ’’ ಎಂದು ಜಾನ್ ವಿಲ್ಮತ್ ನುಡಿದರು.

ಅದೇ ವೇಳೆ, ಮುಂದಿನ ದಶಕಗಳಲ್ಲಿ ಯುರೋಪ್‌ನ ಜನಸಂಖ್ಯೆ ಕುಸಿಯುವ ನಿರೀಕ್ಷೆಯಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News