ಆಕ್ಸಿಜನ್ ಪೂರೈಕೆ ಸ್ಥಗಿತ: ಇಂಧೋರ್ ಆಸ್ಪತ್ರೆಯಲ್ಲಿ 11 ಮಂದಿ ಮೃತ್ಯು

Update: 2017-06-23 04:12 GMT

ಇಂದೋರ್, ಜೂ. 23: ಇಲ್ಲಿನ ಮೈ ಹಾಸ್ಪಿಟಲ್‌ನಲ್ಲಿ ಮುಂಜಾನೆ 3 ಗಂಟೆಯಿಂದ 4 ಗಂಟೆಯ ನಡುವೆ 15 ನಿಮಿಷಗಳ ಕಾಲ, ನಿಗೂಢವಾಗಿ ಆಮ್ಲಜನಕ ಸರಬರಾಜು ಸ್ಥಗಿತವಾದ ಹಿನ್ನೆಲೆಯಲ್ಲಿ ವೆಂಟಿಲೇಶನ್ ವ್ಯವಸ್ಥೆಯಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ರೋಗಿಗಳು ಧಾರುಣವಾಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಆದರೆ ಆಸ್ಪತ್ರೆ ಮಾತ್ರ ಇದನ್ನು ನಿರಾಕರಿಸಿದ್ದು, ಇವು ಮಾಮೂಲಿ ಸಾವುಗಳು ಎಂದು ಸಮರ್ಥಿಸಿಕೊಂಡಿದೆ. ಆಮ್ಲಜನಕ ಕೊರತೆ ಅಥವಾ ಇತರ ನಿರ್ಲಕ್ಷ್ಯದಿಂದ ರೋಗಿಗಳು ಸಾವಿಗೀಡಾಗಿರುವ ಸಾಧ್ಯತೆ ಕಡಿಮೆ. ಅಗತ್ಯ ಬಿದ್ದರೆ ಪ್ರಕರಣ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ್ ದುಬೆ ಹೇಳಿದ್ದಾರೆ.

ಅದರೆ ನಿಗೂಢ ಸಾವಿನ ಕಾರಣ ಹುಡುಕಿ ಪತ್ರಕರ್ತರು ಹೊರಟಾಗ ಎಲ್ಲ ಮೃತ ವ್ಯಕ್ತಿಗಳ ದಾಖಲೆಗಳನ್ನು ಮತ್ತು ಅಮ್ಲಜನಕ ಪೂರೈಕೆಯ ಲಾಗ್‌ಬುಕ್ ಮಾಯ ಮಾಡಿರುವುದು ಅನುಮಾನ ಬಲಗೊಳ್ಳಲು ಕಾರಣವಾಗಿದೆ. ಎಲ್ಲವೂ ಸುಸ್ಥಿತಿಯಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ದಾಖಲೆಗಳನ್ನು ತೋರಿಸಲು ನಿರಾಕರಿಸಿದ್ದಾರೆ.

ಮುಂಜಾನೆ 3ರ ವೇಳೆಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು ಎಂದು ಉನ್ನತ ಮೂಲಗಳು ಹೇಳಿವೆ. ಆದರೆ ಆಮ್ಲಜನಕ ಘಟಕದ ದಾಖಲೆಗಳು ನಾಪತ್ತೆಯಾಗಿದ್ದು, ಇಲ್ಲಿ ನಿಯೋಜಿತರಾಗಿದ್ದ ಉದ್ಯೋಗಿ ಕೂಡಾ ಪತ್ತೆ ಇಲ್ಲ. ಈ ಮಾಹಿತಿ ಕೆಲವೇ ಹಿರಿಯ ಅಧಿಕಾರಿಗಳಿಗೆ ಮಾತ್ರ ತಿಳಿದಿದ್ದು, ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News