ಬಿಜೆಪಿ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡಿಸಲಿ

Update: 2017-06-26 18:53 GMT

ಮಾನ್ಯರೆ,

ಸತತವಾಗಿ ಮೂರು ವರ್ಷಗಳಿಂದ ತೀವ್ರವಾದ ಬರಗಾಲದ ಹಿನ್ನೆಲೆಯಲ್ಲಿ ರೈತರ ನೆರವಿಗೆ ಧಾವಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಕಾರಿ ಬ್ಯಾಂಕುಗಳಲ್ಲಿ ಪಡೆದ 50,000 ರೂ.ವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಸಾಲ ಮನ್ನಾದಿಂದಾಗಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಸುಮಾರು 8,500 ಕೋಟಿ ರೂಪಾಯಿಗಳ ಹೊರೆಯಾಗುತ್ತದಾದರೂ ಸುಮಾರು 23 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗುತ್ತದೆ.
ರೈತರ ಬಗ್ಗೆ ಅತೀವವಾದಂತಹ ಪ್ರೇಮವನ್ನು ತೋರಿಸುವ ರಾಜ್ಯದ ಬಿಜೆಪಿಯ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಕೂಡಲೇ ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವರ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 50,000ರೂ. ವರೆಗಿನ ಸಾಲವನ್ನು ಕೂಡಾ ಹೀಗೆಯೇ ಮನ್ನಾ ಮಾಡಿಸಲಿ.
 ರಾಜ್ಯ ಸರಕಾರ ತನ್ನ ಕರ್ತವ್ಯವನ್ನು ನಿರ್ವಹಿಸಿದೆ. ಈಗ ರೈತರ ನೆರವಿಗೆ ನಿಲ್ಲಬೇಕಾದದ್ದು ಕೇಂದ್ರ ಸರಕಾರದ ಕರ್ತವ್ಯವೂ ಆಗಿರುತ್ತದೆ. ಬಿಜೆಪಿಯ ನಾಯಕರು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿದ ರೀತಿಯಲ್ಲಿ ತಮ್ಮದೇ ಪಕ್ಷ ಆಡಳಿತದಲ್ಲಿರುವ ಕೇಂದ್ರ ಸರಕಾರದ ಮೇಲೂ ಒತ್ತಾಯವನ್ನು ತರಲಿ. ರೈತರ ಹಿತಕ್ಕಾಗಿ ಸತ್ಯಾಗ್ರಹವನ್ನು ಹೂಡಲಿ.
ಈಗಾಗಲೇ ಕೇಂದ್ರದ ಹಣಕಾಸು ಸಚಿವರು ರೈತರ ಸಾಲ ಮನ್ನಾ ಸಾಧ್ಯವಿಲ್ಲವೆಂದು ಹೇಳಿರುತ್ತಾರೆ. ಅವರ ಹೇಳಿಕೆಯ ಬಗ್ಗೆ ಯಾವುದೇ ಬಿಜೆಪಿ ನಾಯಕರು ಖಂಡಿಸಿಲ್ಲ. ರೈತರ ಮೇಲೆ ಪ್ರೀತಿ ಚುನಾವಣೆಯ ಲಾಭಕ್ಕಾಗಿ ಮಾತ್ರ ಇರಬಾರದು. ನಿಜವಾಗಿಯೂ ರೈತರ ಮೇಲೆ ಪ್ರೀತಿ ಇದ್ದರೆ, ರಾಜ್ಯದ ಬಿಜೆಪಿ ನಾಯಕರು ಕೇಂದ್ರ ಸರಕಾರದ ಮೇಲೆ ಒತ್ತಡವನ್ನು ಹಾಕಲೇಬೇಕು. ಉತ್ತರ ಪ್ರದೇಶದ ಸರಕಾರ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಿರುವುದು, ಚುನಾವಣಾ ಪೂರ್ವದಲ್ಲಿ ಗೆಲ್ಲಲೇಬೇಕೆಂಬ ಕಾರಣಕ್ಕಾಗಿ ಮಾಡಿದಂತಹ ತಂತ್ರವಾಗಿದೆ. ಇನ್ನು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರಗಳೇ ಇರುವುದರಿಂದ, ಅವರಿಗೆ ಕೇಂದ್ರದ ನೆರವು ದೊರೆಯುವ ಸಾಧ್ಯತೆಗಳಿರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಲು ಕೇಂದ್ರ ಸರಕಾರ ಮನಸ್ಸು ಮಾಡುತ್ತಿಲ್ಲವೆನ್ನುವುದು ಬೇಸರದ ಸಂಗತಿಯಾಗಿದೆ.
 

Similar News