ಹಿಜ್‌ಬುಲ್ ಮುಖ್ಯಸ್ಥ ಜಾಗತಿಕ ಉಗ್ರ: ಅಮೆರಿಕ

Update: 2017-06-27 04:15 GMT

ವಾಷಿಂಗ್ಟನ್, ಜೂ. 27: ಹಿಜ್‌ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ನನ್ನು ಜಾಗತಿಕ ಉಗ್ರ ಎಂದು ಅಮೆರಿಕ ಘೋಷಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಶ್ವೇತಭವನಕ್ಕೆ ಭೇಟಿ ನೀಡುವ ಕೆಲವೇ ಗಂಟೆಗಳಿಗೆ ಮುನ್ನ ಈ ಘೋಷಣೆ ಹೊರಬಿದ್ದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ಮಾತುಕತೆಯಲ್ಲಿ ಜಾಗತಿಕ ಭದ್ರತೆ ಕೂಡಾ ಪ್ರಮುಖ ವಿಷಯವಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ನಿರ್ಧಾರ ವಿಶೇಷ ಮಹತ್ವ ಪಡೆದಿದೆ.

ಬುಷ್ ಹಾಗೂ ಒಬಾಮಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತಕ್ಕೆ ನೀಡಿದ್ದ ಮಹತ್ವಕ್ಕಿಂತಲೂ ಹೆಚ್ಚಿನ ಮಹತ್ವವನ್ನು ಟ್ರಂಪ್ ಆಡಳಿತ ಭಾರತಕ್ಕೆ ನೀಡುತ್ತಿದೆ ಎಂಬ ಸ್ಪಷ್ಟ ಸಂದೇಶ ಇದರಿಂದ ಸಿಕ್ಕಿದಂತಾಗಿದೆ. ಸಲಾಹುದ್ದೀನ್ ಜಾಗತಿಕ ಉಗ್ರ ಎಂದು ಘೋಷಿಸುವಂತೆ ಭಾರತ ಧೀರ್ಘಕಾಲದಿಂದಲೂ ಆಗ್ರಹಿಸುತ್ತಾ ಬಂದಿತ್ತು.

ಮೋದಿಗೆ ರತ್ನಗಂಬಳಿ ಸ್ವಾಗತಕ್ಕೆ ಅಮೆರಿಕ ಮುಂದಾಗಿದ್ದು, ದೇಶದ ಪ್ರಥಮ ಮಹಿಳೆ ಮಲಾನಿಯಾ ಟ್ರಂಪ್ ಕೂಡಾ ಮೋದಿ ಸ್ವಾಗತದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಮೋದಿ ಗೌರವಾರ್ಥ ಏರ್ಪಡಿಸಿರುವ ಔತಣಕೂಟದಲ್ಲೂ ಮಲಾನಿಯಾ ಉಪಸ್ಥಿತಿ ಇರುತ್ತದೆ. ಕಳೆದ ಸೆಪ್ಟೆಂಬರ್‌ನಲ್ಲಿ ಅಮೆರಿಕ ಭೇಟಿ ನೀಡಿದ ವೇಳೆ ಮೋದಿ, ನವರಾತ್ರಿ ಉಪವಾಸದಲ್ಲಿ ಇದ್ದ ಕಾರಣ ಔತಣಕೂಟದಲ್ಲಿ ಪಾಲ್ಗೊಳ್ಳದೇ ವಾಪಸ್ಸಾಗಿದ್ದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೂಲದ ಸಲಾಹುದ್ದೀನ್, ಜಿಹಾದಿ ಬೆಂಬಲಿತ ಪಾಕಿಸ್ತಾನಿ ಸೇನೆಯ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News