ಮೋಡ ಬಿತ್ತನೆಗೆ ಗಂಭೀರ ಚಿಂತನೆ: ಕಾಗೋಡುತಿಮ್ಮಪ್ಪ

Update: 2017-06-28 12:03 GMT

ಬೆಂಗಳೂರು, ಜೂ.28: ರಾಜ್ಯದಲ್ಲಿ ಮುಂಗಾರು ತೃಪ್ತಿಕರವಾಗಿಲ್ಲ. ಮಲೆನಾಡು ಭಾಗದಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಕರಾವಳಿ ಭಾಗದಲ್ಲಿ ಮಾತ್ರ ಮಳೆ ಆಗುತ್ತಿದೆ. ಹೀಗಾಗಿ ಆತಂಕ ಹೆಚ್ಚಾಗುತ್ತಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ ಮೊದಲ ವಾರದವರೆಗೆ ಕಾಯುತ್ತೇವೆ. ನಂತರ, ಜು.4ರಂದು ಸಂಪುಟ ಉಪ ಸಮಿತಿ ಸಭೆ ನಡೆಸಿ ಮುಂಗಾರು ವೈಫಲ್ಯಕ್ಕೆ ಸಂಬಂಧಿಸಿದಂತೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸುತ್ತೇವೆ ಎಂದರು.
ಮೋಡ ಬಿತ್ತನೆಗೆ ಈಗಾಗಲೆ ಟೆಂಡರ್ ಕರೆಯಲಾಗಿದೆ. ಮೋಡ ಬಿತ್ತನೆ ಸವಾಲಿನ ಕೆಲಸ. ಇದು ಯಶಸ್ವಿಯಾಗಲು ಮೋಡಗಳಲ್ಲಿಯೂ ಒಂದು ಹಂತದಲ್ಲಿ ಸತ್ವವಿರಬೇಕು. ಸುಮಾರು 300-400 ಕೋಟಿ ರೂ.ಗಳನ್ನು ಇದಕ್ಕಾಗಿ ಖರ್ಚು ಮಾಡಬೇಕಾಗುತ್ತದೆ. ಕೆಲವೊಮ್ಮೆ ಈ ಯೋಜನೆ ವಿಫಲವಾಗುವ ಸಾಧ್ಯತೆಗಳು ಇರುತ್ತವೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.

ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಮೇವಿನ ಸಮಸ್ಯೆ ಬಗೆಹರಿದಿಲ್ಲ. ಆದುದರಿಂದ, ಕೆಲವೆಡೆ ಗೋಶಾಲೆಗಳನ್ನು ಮುಂದುವರೆಸಲಾಗುತ್ತಿದೆ. ಮುಂಗಾರು ವಿಫಲವಾದರೆ ಮೇವಿನ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗಬಹುದು. ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರದಿಂದ ಬಂದ 1600 ಕೋಟಿ ರೂ.ಬರಪರಿಹಾರವನ್ನು 23 ಲಕ್ಷ ರೈತರಿಗೆ ನೇರವಾಗಿ ಹಂಚಿಕೆ ಮಾಡಲಾಗಿದೆ. ಆಧಾರ್ ಸಂಖ್ಯೆ ಹೊಂದಾಣಿಕೆ ಸಮಸ್ಯೆಯಿಂದಾಗಿ ಇನ್ನು 80 ಕೋಟಿ ರೂ.ಗಳನ್ನು ಹಂಚಿಕೆ ಮಾಡಬೇಕಿದೆ. ಅದನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದ್ದು, ಪರಿಶೀಲನೆ ನಡೆಸಿ ರೈತರಿಗೆ ಪರಿಹಾರ ವಿತರಿಸುವಂತೆ ಸೂಚಿಸಲಾಗಿದೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.

ರಾಜ್ಯ ಸರಕಾರವು ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಸಹಕಾರಿ ಕ್ಷೇತ್ರವು ಸಂಪೂರ್ಣವಾಗಿ ಮಾಫಿಯಾ ಕೈಯಲ್ಲಿದೆ. ಹೀಗಾಗಿ ಸಮಸ್ಯೆಯಾಗಿದೆ. ಹೊಸಬರಿಗೆ ಸಾಲ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರಿಗೆ ಸಕ್ರಮ ಮಾಡಿಕೊಡಲು ಸರಕಾರ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಪಿಡಿಓ ಹಾಗೂ ಗ್ರಾಮ ಲೆಕ್ಕಿಗರು ನಕಾಶೆಯೊಂದಿಗೆ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಯಾರು ಸಕ್ರಮಕ್ಕೆ ಅರ್ಜಿ ಹಾಕಿಲ್ಲ ಅವರಿಂದ ಅರ್ಜಿ ಪಡೆಯುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದ ಯಶಸ್ಸಿಗೆ ಶಾಸಕರ ಪಾತ್ರ ಪ್ರಮುಖವಾದದ್ದು. ಆದರೆ, ದುರಾದೃಷ್ಟವಶಾತ್ ಹಲವಾರು ಭಾಗಗಳಲ್ಲಿ ಶಾಸಕರು ಈ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ. ಅಮಾಯಕರು ಈ ಸಮಸ್ಯೆಗೆ ಸಿಲುಕಿ ನರಳಬಾರದು ಎಂಬುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.
ಹಿಂಗಾರು ಬೆಳೆ ನಷ್ಟದ ಹಿನ್ನೆಲೆ. 800ಕೋಟಿ ರೂ.ನೀಡಲು ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಯಾವುದೆ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾನು ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ, ನಾಳೆ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ, ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News