×
Ad

ಕೃಷ್ಣಮಠದಲ್ಲಿ ಇಫ್ತಾರ್ ಆಯೋಜನೆ: ಪೇಜಾವರ ಶ್ರೀ ನಡೆಗೆ ಕಾಂಗ್ರೆಸ್ ಮೆಚ್ಚುಗೆ

Update: 2017-06-28 17:38 IST

ಬೆಂಗಳೂರು, ಜೂ.24: ಪವಿತ್ರ ರಮಝಾನ್ ಮಾಸದ ಅಂಗವಾಗಿ ಮುಸ್ಲಿಮ್ ಬಾಂಧವರಿಗೆ ಉಡುಪಿಯ ಶ್ರೀಕೃಷ್ಣಮಠದಲ್ಲಿ ಇಫ್ತಾರ್ ಸೌಹಾರ್ದ ಕೂಟವನ್ನು ಆಯೋಜನೆ ಮಾಡಿದ್ದ ಪೇಜಾವರ ಶ್ರೀಗಳ ನಡೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಸಮಾಜದಲ್ಲಿ ಸೌಹಾರ್ಧತೆ ಹಾಗೂ ಸಾಮರಸ್ಯವನ್ನು ಕಾಪಾಡುವ ದೃಷ್ಟಿಯಿಂದ ಪೇಜಾವರ ಶ್ರೀಗಳ ಈ ನಡೆಯು ಅತ್ಯಂತ ಪ್ರಶಂಸನೀಯವಾಗಿದೆ ಎಂದರು.
ಕೇವಲ ಕರ್ನಾಟಕವಷ್ಟೇ ಅಲ್ಲ, ಇಡೀ ದೇಶಕ್ಕೆ ಮಾದರಿಯಾಗುವಂತಹ ಕ್ರಮ ಇದಾಗಿದೆ. ಪೇಜಾವರ ಶ್ರೀಗಳ ಈ ನಡೆಗೆ ಇಡೀ ದೇಶದಲ್ಲೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಹಾತ್ಮಗಾಂಧೀಜಿಯವರು ಇಂತಹ ಕ್ರಮಗಳನ್ನು ಬಯಸಿದ್ದರು ಎಂದು ಅವರು ಹೇಳಿದರು.

ದೇಶದಲ್ಲಿ ಇಂತಹ ಸಾಮರಸ್ಯವನ್ನು ಜನ ಬಯಸುತ್ತಾರೆ. ಆದರೆ, ಶ್ರೀಗಳ ನಡೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಟೀಕೆ ಮಾಡುವುದು ಸರಿಯಲ್ಲ. ಮುಸ್ಲಿಮ್ ಬಾಂಧವರಿಗೆ ಮಠದ ಆವರಣದಲ್ಲಿ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ರಾಜ್ಯದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಪೇಜಾವರ ಶ್ರೀ ಮುನ್ನುಡಿ ಬರೆದಿದ್ದಾರೆ ಎಂದು ಪರಮೇಶ್ವರ್ ಶ್ಲಾಘಿಸಿದರು.

ಪೇಜಾವರ ಶ್ರೀಗಳ ಕ್ರಮವನ್ನು ವಿರೋಧಿಸುವವರಿಗೆ ರಾಜ್ಯದಲ್ಲಿ ಶಾಂತಿ, ಸೌಹಾರ್ಧತೆ ನೆಲೆಯೂರುವುದು ಇಷ್ಟವಿಲ್ಲದಂತೆ ಭಾಸವಾಗುತ್ತಿದೆ ಎಂದು ಪರಮೇಶ್ವರ್, ಪರೋಕ್ಷವಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಪೇಜಾವರ ಶ್ರೀಗಳು ಇಫ್ತಾರ್ ಕೂಟ ಆಯೋಜಿಸುವ ಮೂಲಕ ಸರ್ವಧರ್ಮ ಸಮನ್ವಯತೆಗೆ ನಾಂದಿ ಹಾಡಿದ್ದಾರೆ. ಇದು ನಿಜಕ್ಕೂ ಅಭಿನಂದನಾರ್ಹ. ಆದರೆ ಕೆಲವರು ಅನಗತ್ಯವಾಗಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಮೈಸೂರಿನ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಗೋಮಾಂಸ ಸೇವನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಒಬ್ಬರ ಆಹಾರ ಕ್ರಮವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಕೇವಲ ರಾಜಕೀಯ ಕಾರಣಕ್ಕಾಗಿ ಯಡಿಯೂರಪ್ಪ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಗೋವಾ ರಾಜ್ಯದಲ್ಲಿ ಇವರ ಪಕ್ಷದ ಸರಕಾರವೇ ಅಧಿಕಾರದಲ್ಲಿದೆ. ಮೊದಲು ಅಲ್ಲಿ ಗೋಹತ್ಯೆ ಹಾಗೂ ಗೋಮಾಂಸ ಸೇವೆಯನ್ನು ನಿಷೇಧಿಸಲಿ. ಇಲ್ಲವಾದಲ್ಲಿ ಇಡೀ ದೇಶದಲ್ಲೆ ನಿಷೇಧಿಸಲಿ. ಅದನ್ನು ಬಿಟ್ಟು ಬೇರೆಯವರ ಆಹಾರ ಕ್ರಮವನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News