ಡಾ.ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ: ಎಚ್.ಸಿ.ಕಾಂತರಾಜು

Update: 2017-06-28 12:10 GMT

ಬೆಂಗಳೂರು, ಜೂ.28: ಪಶ್ಚಿಮ ಘಟ್ಟಗಳ ಸಂರಕ್ಷಿಸುವ ಸಲುವಾಗಿ ಸಿದ್ಧಗೊಂಡಿರುವ ಡಾ.ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಕಾಂತರಾಜು ತಿಳಿಸಿದ್ದಾರೆ.

ಗಣದಲ್ಲಿ ಆಯೋಜಿಸಿದ್ದ ಕಾಡಿನ ಮಿತ್ರ ಪತ್ರಿಕೆಯ 24ನೆ ವರ್ಷದ ವಿಶೇಷ ಸಂಚಿಕ ಬಿಡುಗಡೆ ಹಾಗೂ ಕಾಡಿನ ಮಿತ್ರ ರಾಜ್ಯ ಹಾಗೂ ರಾಷ್ಟ್ರೀಯ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರ ಹಲವು ಕಾರಣಗಳನ್ನು ನೀಡಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿದೆ. ಈಗ ಪಶ್ಚಿಮ ಘಟ್ಟಗಳ ಸಂರಕ್ಷಣಾ ನಿಗಮದ ಅಧ್ಯಕ್ಷ ಎಸ್.ಚಂದ್ರಶೇಖರ್ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಕಳೆದ ಏಳು ತಿಂಗಳಿಂದ ಪಶ್ಚಿಮ ಘಟ್ಟಗಳಲ್ಲಿ ತಿರುಗಾಟ ನಡೆಸಿ ಅಧ್ಯಯನ ನಡೆಸುತ್ತಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಪದ್ಮಿನಿ ಪೊನ್ನಪ್ಪ ಮಾತನಾಡಿ, ಮನುಷ್ಯರು ಸೇರಿದಂತೆ ಪ್ರಾಣಿ ಪಕ್ಷಿಗಳು ಆರೋಗ್ಯಯುತವಾಗಿ ಬದುಕಬೇಕಾದರೆ ಪರಿಸರ ಬಹುಳ ಮುಖ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರವನ್ನು ಸಂರಕ್ಷಿಸುವುದರ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಆಶಿಸಿದರು.

ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಇಂದಿಗೂ ಅರಿವಿಲ್ಲ. ಸ್ವಚ್ಛತೆ ಕಾಪಾಡುವಂತೆ ನಾಮಫಲಕಗಳನ್ನು ಹಾಕಿದ್ದರು, ಆ ಬಗ್ಗೆ ಕಾಳಜಿ ವಹಿಸುವುದಿಲ್ಲ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡುವುದು, ಮಲ ಮೂತ್ರ ವಿಸರ್ಜಿಸುವ ಮೂಲಕ ಪ್ರವಾಸದ ನೆಪದಲ್ಲಿ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಕೊಡಗಿನಿಂದ ಕೇರಳಕ್ಕೆ ವಿದ್ಯುತ್ ತಂತಿ ಹಾಕುವ ಸಂದರ್ಭದಲ್ಲಿ ಲಕ್ಷಾಂತರ ಮರಗಳನ್ನು ಕಡಿಯಲಾಯಿತು. ಹೀಗೆ ಅಭಿವೃದ್ಧಿಗಾಗಿ ಅನಿವಾರ್ಯವಾಗಿ ಮರಗಳನ್ನು ಕಡಿಯಬೇಕಾಗುತ್ತದೆ. ಆದರೆ, ಒಂದು ಮರವನ್ನು ಕಡಿದರೆ, ಅದಕ್ಕೆ ಪರ್ಯಾಯವಾಗಿ 20 ಸಸಿಗಳನ್ನು ನೆಡಬೇಕು. ಆ ಮೂಲಕ ಪರಿಸರದ ಸಮತೋಲನವನ್ನು ಕಾಪಾಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣಾ ನಿಗಮದ ಅಧ್ಯಕ್ಷ ಎಸ್.ಚಂದ್ರಶೇಖರ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ, ದೇವಾಂಗ ಸಂಘದ ಪ್ರಾಂಶುಪಾಲ ಡಾ.ಎಸ್.ಮಂಜುನಾಥ್, ವನ್ಯಜೀವಿ ಪರಿಚಾರಕಿ ಡಾ.ರಿತಿಕ ಮಂಜುಳಾ ಹಾಗೂ ಕಾಡಿನ ಮಿತ್ರ ಪತ್ರಿಕೆಯ ಸಂಪಾದಕ ನಂದಿದುರ್ಗ ಬಾಲುಗೌಡ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News