ಫುಟ್ಬಾಲ್ ಕ್ಷೇತ್ರದಲ್ಲಿ ಭಾರತ ಉತ್ತುಂಗಕ್ಕೇರಲಿ: ಪ್ರಮೋದ್ ಮಧ್ವರಾಜ್
ಬೆಂಗಳೂರು, ಜೂ.28: ಫುಟ್ಬಾಲ್ ಕ್ಷೇತ್ರದಲ್ಲಿ ಭಾರತ ಬಲಿಷ್ಠವಾಗುವ ನಿಟ್ಟಿನಲ್ಲಿ ಫುಟ್ಬಾಲ್ ತರಬೇತಿ ಸಂಸ್ಥೆಗಳು ಹೆಚ್ಚಿನ ಪರಿಶ್ರಮ ಹಾಕಬೇಕಾಗಿದೆ ಎಂದು ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಫುಟ್ಬಾಲ್ ಆಟಗಾರರಿಗೆ ಉತ್ತಮ ತರಬೇತಿ ನೀಡುವ ನಿಟ್ಟಿನಲ್ಲಿ ನಗರದ ಕೆಂಗೇರಿಯಲ್ಲಿ ಆರಂಭಿಸಲಾಗಿರುವ ಆರ್‌ಎಫ್‌ಸಿ ರೆಸಿಡೆನ್ಷಿಯಲ್ ಫುಟ್ಬಾಲ್ ಅಕಾಡೆಮಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್‌ಎಫ್‌ಸಿಎಫ್‌ಎದ ಸಹ ಸಂಸ್ಥಾಪಕರು ಬೆಂಗಳೂರಿನಲ್ಲಿ ಆರ್‌ಎಫ್‌ಸಿ ಅಕಾಡೆಮಿಯನ್ನು ಸ್ಥಾಪಿಸಿದ್ದು, ಫುಟ್ಬಾಲ್‌ನಲ್ಲಿ ಆಸಕ್ತಿ ಹೊಂದಿರುವ ಯುವ ಉತ್ಸಾಹಿ ಕ್ರೀಡಾಳುಗಳಿಗೆ ಮುಕ್ತ ಅವಕಾಶ ನೀಡಲಿದೆ. ಇಲ್ಲಿ ಪ್ರವೇಶ ಪಡೆಯುವ ಶಿಬಿರಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಕ್ರೀಡಾಪಟುಗಳ ಉನ್ನತೀಕರಣ ಕಾರ್ಯಕ್ರಮಗಳು ಇರಲಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಬಾಲಕಿ ಅಥವಾ ಬಾಲಕ ಫುಟ್ಬಾಲ್ ಬಗ್ಗೆ ಇರುವ ಕನಸನ್ನು ನನಸು ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶವೆಂದು ಅವರು ತಿಳಿಸಿದರು.
ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಕ್ರೀಡೆ ಎಂದರೆ ಫುಟ್ಬಾಲ್. ಇದಕ್ಕೆ ವಿಶ್ವದಲ್ಲಿ 3.5 ಬಿಲಿಯನ್‌ಗೂ ಅಧಿಕ ಅಭಿಮಾನಿಗಳಿದ್ದಾರೆ. ವಿಶೇಷವೆಂದರೆ, ಭಾರತದಲ್ಲಿ 170 ದಶಲಕ್ಷ ಫುಟ್ಬಾಲ್ ಪ್ರೇಮಿಗಳಿದ್ದಾರೆ. ಆದರೆ, ನಮ್ಮಲ್ಲಿ ವೃತ್ತಿಪರ ಫುಟ್ಬಾಲ್ ಕ್ರೀಡಾಪಟುಗಳನ್ನು ತಯಾರಿಸುವಲ್ಲಿ ಸಾಕಷ್ಟು ಹಿಂದೆ ಬಿದಿದ್ದೇವೆ. ಇದನ್ನು ಸರಿತೂಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಆರ್‌ಎಫ್‌ಸಿ ಫುಟ್ಬಾಲ್ ಅಕಾಡೆಮಿ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.