ಮರಳಿ ಅಧಿಕಾರದ ಹಿಡಿಯಲು ಸಂಘಟಿತ ಹೋರಾಟ: ವೇಣುಗೋಪಾಲ್
ಬೆಂಗಳೂರು, ಜೂ. 28: ಮುಂಬರುವ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯಲು ಕಾರ್ಯಕರ್ತನಿಂದ ನಾಯಕನವರೆಗೂ ಸಂಘಟಿತ ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳೊಂದಿಗೆ ಸಭೆ ನಡೆಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾವಾರು ಮುಖಂಡರ ನಡುವಿದ್ದ ಅಸಮಾಧಾನ, ಅತೃಪ್ತಿಯನ್ನು ಶಮನ ಮಾಡುವ ನಿಟ್ಟಿನಲ್ಲಿ ನಡೆಸಿದ ಸಭೆ ಯಶಸ್ವಿಯಾಗಿದೆ. ಅದೇ ರೀತಿಯಲ್ಲಿ ಇಂದು ಕೆಪಿಸಿಸಿಯ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡ, ಕಿಸಾನ್ ಮೋರ್ಚಾ, ಹಿಂದುಳಿದ ವರ್ಗಗಳ ಘಟಕ, ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್, ಮಹಿಳಾ ಘಟಕ ಸೇರಿದಂತೆ 14ಕ್ಕೂ ಹೆಚ್ಚು ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ ಮುಂಬರುವ ಚುನಾವಣೆಯಲ್ಲಿ ಅವರುಗಳ ಕಾರ್ಯ ನಿರ್ವಹಣೆ ಹಾಗೂ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆಯೂ ಸೂಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.