ಸಂವಿಧಾನದ ಆಶಯ ಈಡೇರಿಸುವುದೇ ನಿಜವಾದ ರಾಷ್ಟ್ರೀಯತೆ: ಸುಭಾಷಿಣಿ ಅಲಿ

Update: 2017-06-29 14:11 GMT

ಬೆಂಗಳೂರು, ಜೂ.29: ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ನಿಜವಾದ ರಾಷ್ಟ್ರೀಯತೆ ಎಂಬುದನ್ನು ದೇಶದ ಜನತೆಗೆ ಪರಿಣಾಮಕಾರಿಯಾಗಿ ಮುಟ್ಟಿಸುವಂತಹ ಕೆಲಸವಾಗಬೇಕಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಸುಭಾಷಿಣಿ ಅಲಿ ತಿಳಿಸಿದ್ದಾರೆ.

ಗುರುವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯತೆ-ಭಾರತವೆಂಬ ಪರಿಕಲ್ಪನೆ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ದೇಶದಲ್ಲಿ ಜಾರಿಯಲ್ಲಿರುವ ಬಹುಸಂಸ್ಕೃತಿಗಳನ್ನು ಗೌರವಿಸುವಂತಹ ಸಂವಿಧಾನದ ಆಶಯವನ್ನು ಎಲ್ಲರೂ ಪಾಲಿಸೋಣವೆಂದು ತಿಳಿಸಿದರು.

ಪ್ರಸ್ತುತ ದೇಶದಲ್ಲಿ ಕೆಲವು ಹಿಂದೂ ಮೂಲಭೂತವಾದಿ ಸಂಘಟನೆಗಳು ರಾಷ್ಟ್ರೀಯತೆ ಕಲ್ಪನೆಯನ್ನು ಸಂಕುಚಿತಗೊಳಿಸುವ ಮೂಲಕ ತಮ್ಮ ಸ್ವಾರ್ಥ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ. ‘ಹಸು’ವನ್ನು ರಾಷ್ಟ್ರೀಯತೆಯ ಒಂದು ಸಂಕೇತವಾಗಿಸಿ, ಹಸುವನ್ನು ತಿನ್ನುವವರ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ನಡೆಸುತ್ತಿದ್ದಾರೆ. ಹಾಗೆಯೇ ಕೇವಲ ‘ಭಾರತ ಮಾತಾ ಕೀ ಜೈ’ ಘೋಷಣೆಗೆ ರಾಷ್ಟ್ರೀಯತೆಯನ್ನು ಸೀಮಿತಗೊಳಿಸಿ, ತಮಗೆ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ದೇಶದಲ್ಲಿರುವ ಪ್ರತಿಯೊಬ್ಬರು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾನತೆಯನ್ನು ಹೊಂದಿದಾಗ ಮಾತ್ರವೇ ರಾಷ್ಟ್ರೀಯತೆಯ ಕಲ್ಪನೆ ಯಶಸ್ವಿಗೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿಯೇ ಅಸಮಾನತೆಯಿಂದ ನರಳುತ್ತಿರುವ ಭಾರತದಂತಹ ದೇಶದಲ್ಲಿ ರಾಷ್ಟ್ರೀಯತೆಯನ್ನು ಒಪ್ಪುವುದಿಲ್ಲವೆಂದು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೂರ್ 1920ರಲ್ಲಿಯೇ ಹೇಳಿದ್ದರು ಎಂದು ಅವರು ನೆನಪು ಮಾಡಿಕೊಂಡರು.

ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು ನೀಡುವ ಮೂಲಕ ರಾಷ್ಟ್ರೀಯತೆಗೆ ಹೊಸ ರೂಪವನ್ನು ಕೊಟ್ಟಿದ್ದಾರೆ. ಆದರೆ, ದೇಶವನ್ನಾಳಿದ ಎಲ್ಲ ರಾಜಕೀಯ ಪಕ್ಷಗಳು ಅಂಬೇಡ್ಕರ್ ಆಶಯವನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಸಂಘಪರಿವಾರದ ಅಂಗವಾದ ಬಿಜೆಪಿಯಂತೂ ಅಂಬೇಡ್ಕರ್‌ರವರ ಸಂವಿಧಾನದ ಜಾಗದಲ್ಲಿ ಮನುಸ್ಮತಿಯನ್ನು ತರಲು ಹೊರಟಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

   ಮೂಲಭೂತವಾದಿ ಪಠ್ಯಪುಸ್ತಕ ಹಾಗೂ ಇತಿಹಾಸ ರಚನೆಯಲ್ಲಿ ಜಾತ್ಯತೀತ ವೌಲ್ಯಗಳ ಬದಲಿಗೆ ಬ್ರಾಹ್ಮಣೀಕರಣಕ್ಕೆ ಪರವಾದ ಇತಿಹಾಸವನ್ನು ತುಂಬಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಆಡಳಿತ ನಡೆಸಿದ ಮನುವಾದಿ ರಾಜರಾದ ಪೇಶ್ವೆಗಳನ್ನು ಸ್ವಾತಂತ್ರ ಹೋರಾಟಗಾರರೆಂದು ಬಿಂಬಿಸುವ ಮೂಲಕ ಜಾತ್ಯತೀಯ ವೌಲ್ಯಗಳಿಗೆ ಅಪಮಾನ ಮಾಡಲಾಗಿದೆ. ಹೀಗೆ ಹಲವಾರು ವಿಷಯಗಳು ಮನುಸ್ಮತಿಯನ್ನು ಆಧರಿಸಿ ರಚಿತವಾಗಿದೆ. ಈ ಬಗ್ಗೆ ಜನತೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಕರ್ನಾಟಕ ಸರಕಾರದ ಮಾಜಿ ಅಡ್ವೋಕೆಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, 9 ಧರ್ಮ, 300ಭಾಷೆ ಹಾಗೂ 5ಸಾವಿರ ಜಾತಿಗಳನ್ನು ಒಳಗೊಂಡಿರುವ ಭಾರತದಲ್ಲಿ ಜಾತ್ಯತೀತ ವೌಲ್ಯಗಳನ್ನೊಳಗೊಂಡಿರುವುದೇ ನಿಜವಾದ ರಾಷ್ಟ್ರೀಯತೆಯಾಗಿದೆ. ಇದನ್ನು ಹಾಳುಮಾಡಲು ಸಂಘಪರಿವಾರದ ಅಂಗ ಸಂಸ್ಥೆಗಳು ಸದಾ ಪ್ರಯತ್ನಿಸುತ್ತಿವೆ. ಈ ಬಗ್ಗೆ ಸದಾ ಎಚ್ಚರವಿರಬೇಕು ಎಂದು ತಿಳಿಸಿದರು.

 ಬ್ರಾಹ್ಮಣ ಧರ್ಮವನ್ನೇ ಹಿಂದೂ ಧರ್ಮವನ್ನಾಗಿಸಿ ದೇಶದಲ್ಲಿ ಅನಾದಿ ಕಾಲದಿಂದಲೂ ಇದ್ದ ಬಹುಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಹಾಳು ಮಾಡಿ, ದೇಶದಲ್ಲಿ ಅಶಾಂತಿಯನ್ನು ಉಂಟು ಮಾಡಲಾಗುತ್ತಿದೆ. ಬ್ರಾಹ್ಮಣ ಸಮುದಾಯದಲ್ಲಿಯೇ 300ಜಾತಿಗಳಿದ್ದು, ಅಲ್ಲಿಯೂ ಅಸ್ಪಶ್ಯತೆ ಜೀವಂತವಾಗಿದೆ. ಹೀಗಾಗಿ ಬ್ರಾಹ್ಮಣ ಧರ್ಮದ ಪದ್ಧತಿಯನ್ನು ಅನುಸರಿಸಲು ಯೋಗ್ಯವಾಗಿಲ್ಲ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ದಿನೇಶ್ ಅಮಿನ್ ಮಟ್ಟು, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಗೀತಾ, ಕಾರ್ಯದರ್ಶಿ ಗೌರಮ್ಮ, ಲಕ್ಷ್ಮಿ ಸೇರಿದಂತೆ ಸಂಟನೆಯ ಹಲವು ಮುಖಂಡರು ಭಾಗವಹಿಸಿದ್ದರು.

  ಮುಸ್ಲಿಮರು ಉಡುಪಿ ಮಠದಲ್ಲಿ ನಮಾಝ್ ಮಾಡುವ ಮೂಲಕ ಉಡುಪಿ ಮಠವನ್ನು ಪಾವಿತ್ರಗೊಳಿಸಿದ್ದಾರೆ. ಇದಕ್ಕಾಗಿ ಮುಸ್ಲಿಮರಿಗೆ ಅಭಿನಂದನೆ ಸಲ್ಲಿಸಬೇಕು. ಒಮ್ಮಿಮ್ಮೆ ಪೇಜಾವರರು ಪ್ರಗತಿಪರರಂತೆ ವರ್ತಿಸುವ ಮೂಲಕ ಪೇಚಿಗೆ ಸಿಲುಕಿಸುತ್ತಾರೆ.

-ರವಿವರ್ಮ ಕುಮಾರ್, ಮಾಜಿ ಅಡ್ವೋಕೆಟ್ ಜನರಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News