ಅಂಗಡಿಯ ಗೋಡೆ ಕೊರೆದು 1 ಕೆ.ಜಿ ಚಿನ್ನಾಭರಣ ಕಳವು
ಬೆಂಗಳೂರು, ಜೂ.30: ಅಂಗಡಿಯೊಂದರ ಗೋಡೆ ಕೊರೆದು ಸುಮಾರು 1 ಕೆಜಿ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಇಲ್ಲಿನ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಬೊಮ್ಮನಹಳ್ಳಿಯ ಹೊಂಗಸಂದ್ರ ಮುಖ್ಯರಸ್ತೆಯಲ್ಲಿ ಭೀಮ್ರಾಮ್ ಎಂಬುವರಿಗೆ ಸೇರಿದ ಪವನ್ ಜ್ಯುವೆಲರಿ ಅಂಗಡಿಯ ಗೋಡೆ ಕೊರೆದು ಕಳವು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ಗುರುವಾರ ಎಂದಿನಂತೆ ವ್ಯಾಪಾರ-ವಹಿವಾಟು ಮುಗಿಸಿ ಬೀಗ ಹಾಕಿಕೊಂಡು ಭೀಮ್ರಾಮ್ ಮನೆಗೆ ತೆರಳಿದ್ದರು. ಮಧ್ಯರಾತ್ರಿ ಈ ಜ್ಯುವೆಲರಿ ಅಂಗಡಿಗೆ ಹೊಂದಿಕೊಂಡಂತಿರುವ ಮನೆಯ ಗೋಡೆ ಕೊರೆದು ಒಳನುಗ್ಗಿರುವ ದುಷ್ಕರ್ಮಿಗಳು ಅಂಗಡಿಯಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ ಎಂದಿನಂತೆ ಬಾಗಿಲು ತೆರೆಯಲು ಭೀಮ್ರಾಮ್ ಬಂದಾಗಲೇ ಅಂಗಡಿಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.