ಎಸ್ಸಿ, ಎಸ್ಟಿ ನೌಕರರ ಹಿತಕಾಯಲು ಬದ್ಧ: ಎಚ್.ಆಂಜನೇಯ

Update: 2017-06-30 12:57 GMT

ಬೆಂಗಳೂರು, ಜೂ.30: ಎಸ್ಸಿ, ಎಸ್ಟಿ ಸರಕಾರಿ ನೌಕರರ ಹಿತಕಾಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಿದ್ಧವಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ನಗರದ ಸರಕಾರಿ ನೌಕರರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಏರ್ಪಡಿಸಿದ್ದ ‘ಭಡ್ತಿ ಮೀಸಲಾತಿ ಉಳಿಸಿ ಪರಿಶಿಷ್ಟ ನೌಕರರ ರಕ್ಷಿಸಿ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಸರಕಾರಿ ನೌಕರರಿಗೆ ಎದುರಾಗಿರುವ ಅನ್ಯಾಯವನ್ನು ಸರಿಪಡಿಸಲು ಈಗಾಗಲೇ ಕಾನೂನು ತಜ್ಞರ ಜತೆ ಚರ್ಚೆ ನಡೆಸಲಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಭಡ್ತಿ ಮೀಸಲಾತಿ ಪರ ವಾದ ಮಂಡಿಸಲು ಸೂಕ್ತ ವಕೀಲರನ್ನು ನೇಮಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಸರಕಾರ ತನ್ನ ಆಡಳಿತಾವಧಿಯಲ್ಲಿ ದಲಿತ ಸಮುದಾಯಕ್ಕೆ ವೆಚ್ಚ ಮಾಡಿದ್ದು ಕೇವಲ 22 ಸಾವಿರ ಕೋಟಿ ರೂ. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ 60 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಈ ವರ್ಷ 20 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ದಲಿತ ಸಮುದಾಯಕ್ಕೆ ಹೆಚ್ಚೆಚ್ಚು ಸೌಲಭ್ಯ ದೊರೆಯುತ್ತಿದೆ. ಆ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು. ಆ ಮೂಲಕ ಮಂದಿನ ತಲೆಮಾರಿಗೆ ಆದರ್ಶಪ್ರಾಯರಾಗಿ ಬದುಕಬೇಕೆಂದು ಅವರು ಆಶಿಸಿದರು.

ದಲಿತ ಸಮುದಾಯದ ಪ್ರತಿಯೊಬ್ಬ ವಿದ್ಯಾರ್ಥಿಯು ಹಾಸ್ಟೆಲ್ ಪ್ರವೇಶದಿಂದ ವಂಚಿತರಾಗಬಾರದು. ಅದಕ್ಕಾಗಿ ಬಾಡಿಗೆ ಕಟ್ಟಡ ಪಡೆದು ಪ್ರವೇಶ ನೀಡುವಂತೆ ಆದೇಶಿಸಲಾಗಿದೆ. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಎಸ್ಸಿ ಮತ್ತು ಎಸ್ಟಿ ಜನರಿಗೆ 4 ಲಕ್ಷ ಮನೆಗಳನ್ನು ನೀಡಲಾಗುತ್ತಿದೆ. 300 ವಸತಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಈ ವೇಳೆ ವೇದಿಕೆಯಲ್ಲಿದ್ದ ದಲಿತ ಮುಖಂಡರು ಭಡ್ತಿ ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್‌ನ ತೀರ್ಪಿನ ದುಷ್ಪರಿಣಾಮಗಳನ್ನು ತಡೆಯಲು ರಾಜ್ಯ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಹಾಗೂ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಲು ಹಿರಿಯ ವಕೀಲರನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ಸಮಾರಂಭದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನದಾಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಸೋಮಶೇಖರ್, ಸಂಸ್ಥಾಪಕ ಸದಸ್ಯ ಶ್ರೀಧರ ಕಲಿವೀರ್, ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News