ದಲಿತರಿಗೆ ನಿಮ್ಮ ಮನೆಯ ಪ್ರವೇಶ ನೀಡಿ: ಲಕ್ಷ್ಮಿನಾರಾಯಣ ನಾಗವಾರ ಆಗ್ರಹ

Update: 2017-06-30 13:10 GMT

ವಿಜಯಪುರ, ಜೂ. 30: ಬಿಜೆಪಿ ನಾಯಕರು ದಲಿತರ ಮನೆಗಳಿಗೆ ತೆರಳಿ ಊಟ-ಉಪಾಹಾರ ಸೇವಿಸುವ ಬದಲು ದಲಿತರನ್ನೆ ತಮ್ಮ ನಡುಮನೆಗೆ ಪ್ರವೇಶ ನೀಡಿ ಅವರಿಗೆ ಊಟ ಬಡಿಸಬೇಕೆಂದು ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಪೃಶ್ಯರನ್ನು ಊರಿನಿಂದ ಹೊರಗಿಟ್ಟು ಅಪಮಾನ ಮಾಡಿದ್ದು, ಎಲ್ಲರಿಗೂ ತಿಳಿದ ಸಂಗತಿ. ಅಂಬೇಡ್ಕರ್ ಅವರು ಸ್ವಾತಂತ್ರ್ಯಪೂರ್ವ ಹಾಗೂ ಆಧುನಿಕ ಭಾರತದಲ್ಲಿ ಅಸ್ಪೃಶ್ಯತೆ, ಜಾತೀಯತೆ ವಿರುದ್ಧ ಹೋರಾಟ ಮಾಡಿದರು.
ಕಾಳಾರಾಮ್ ದೇವಾಲಯ ಪ್ರವೇಶ, ಚೌಡರ್ ಕೆರೆ ನೀರು ಮುಟ್ಟುವುದು ಸೇರಿ ಹಲವು ಹೋರಾಟಗಳ ಮೂಲಕ ದಲಿತರನ್ನು ಮನುಷ್ಯರನ್ನಾಗಿ ಕಾಣಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ ನೀಡಬೇಕೆಂದು ಪ್ರತಿಪಾದಿಸಿದ್ದರು. ಆದರೂ ಜಾತೀಯತೆ ಇಂದಿಗೂ ಹೋಗಲಿಲ್ಲ, ಅಸಮಾನತೆ ತೊಡೆದು ಸಮಾನತೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತರು ಜಾತಿಯಿಂದ ಅಸ್ಪಶ್ಯತೆಗೆ ಒಳಗಾಗಿ ನೊಂದು-ಬೆಂದ ಜನ. ದಲಿತರಲ್ಲಿ ಜಾತೀಯತೆ, ಮೇಲು-ಕೀಳು ಇಲ್ಲ. ದಲಿತರಿಗೆ ಬೇಕಿರುವುದು ಸಮಾನತೆ ಸಮಾಜ. ಸಮಾನತೆ ನೀಡುವ ಗುಣವನ್ನು ಮೊದಲು ಮೇಲ್ಜಾತಿಯವರು ರೂಢಿಸಿಕೊಳ್ಳಬೇಕು. ಅಸ್ಪೃಶ್ಯತೆ ಆಚರಣೆ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು.

ದಲಿತರ ಮನೆಯಲ್ಲಿ ಊಟ ಮಾಡಿದರೆ ಪ್ರಯೋಜನವಿಲ್ಲ. ಏಕೆಂದರೆ ಸಮಾನತೆಗೆ ಒಳಗಾದವರಿಗೆ ಸಮಾನತೆ ಕೊಡಬೇಕಿರುವುದು ನೀವು. ಮೊದಲು ನಿಮ್ಮ ಮನೆಗಳಲ್ಲಿ ಅಸ್ಪಶ್ಯರಿಗೆ ಪ್ರವೇಶ ನೀಡಿ, ಹೊಟೇಲು-ದೇವಸ್ಥಾನಗಳಿಗೆ ಪ್ರವೇಶ ಕೊಡಿಸಬೇಕು ಎಂದು ಕೋರಿದರು.
ಕೆರೆ ಬಾವಿಗಳಲ್ಲಿ ನೀರು ಮುಟ್ಟಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಿ, ಪೇಜಾವರ ಮಠದಲ್ಲಿ ಸಹಪಂಕ್ತಿ ಭೋಜನ ಏರ್ಪಡಿಸಿ ಎಂದ ಅವರು, ಕೇವಲ ರಾಜಕೀಯ ಪ್ರಚಾರಕ್ಕಾಗಿ ದಲಿತ ಮನೆಯಲ್ಲಿ ಊಟ ಮಾಡುವುದರಿಂದ ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ದೌರ್ಜನ್ಯಕ್ಕೆ ಖಂಡನೆ: ಸಿಂಧಗಿ ತಾಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದೌರ್ಜನ್ಯ ಪ್ರಕರಣ ಸಂಬಂಧ ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರೀತಿಗೆ ಜಾತಿಯ ಬಣ್ಣ ಕಟ್ಟಿ ಹಲ್ಲೆ, ದೌರ್ಜನ್ಯ ನಡೆಸುವುದು ಸಲ್ಲ ಎಂದು ಆಕ್ಷೇಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುರೇಶ್ ಮಣ್ಣೂರ, ಎಫ್.ವೈ.ದೊಡಮನಿ, ಪ್ರಕಾಶ ಕೆಲೂರ, ಶಿವಾಜಿ ಬನವಾಸಿ, ರಾಮಸ್ವಾಮಿ, ಜೀವನಹಳ್ಳಿ ಆರ್.ವೆಂಕಟೇಶ್, ಕ್ಯಾಲಸನಹಳ್ಳಿ ಶ್ರೀನಿವಾಸ, ವೇಣು ಹೆಣ್ಣೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News