×
Ad

ಸೃಜನಾತ್ಮಕತೆ ಬತ್ತಿದ ಶಿಕ್ಷಣ ಕ್ಷೇತ್ರ: ಡಾ.ಮಹಾಬಲೇಶ್ವರ ರಾವ್

Update: 2017-07-01 17:38 IST

ಬೆಂಗಳೂರು, ಜು.1: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಪರೀಕ್ಷೆಗಳಿಗೆ ಹಾಗೂ ಪ್ರಮಾಣ ಪತ್ರಗಳಿಗೆ ಆದ್ಯತೆ ಕೊಡುತ್ತಾರೆಯೇ ಹೊರತು ವಿದ್ಯಾರ್ಥಿಗಳಲ್ಲಿರುವ ಸೃಜನಾತ್ಮಕತೆಯನ್ನು ಪೋಷಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕೆಲಸಗಳಾಗುತ್ತಿಲ್ಲ ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ನವಕರ್ನಾಟಕ ಪ್ರಕಾಶನ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ನಾಡಿನ ಹಿರಿಯ ಸಾಹಿತಿಗಳು ಸಂಪಾದಿಸಿರುವ ಹಾಗೂ ಅನುವಾದಿಸಿರುವ 15 ಶೈಕ್ಷಣಿಕ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ಸ್ವಾಭಿಮಾನದಿಂದ ಕಟ್ಟಿಕೊಳ್ಳಲು ಅಗತ್ಯವಾದ ಕ್ರಮಗಳ ಕುರಿತು ಜನಪ್ರತಿನಿಧಿಗಳಾಗಲಿ, ಇಲಾಖೆಯ ಅಧಿಕಾರಿಗಳು ಕಿಂಚಿತ್ತೂ ಯೋಚಿಸಿದಂತೆ ಕಾಣುವುದಿಲ್ಲ. ಕೇವಲ ಶಾಲಾ-ಕಾಲೇಜುಗಳಲ್ಲಿ ಫಲಿತಾಂಶದ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಮಾತ್ರ ತಮ್ಮ ಕಾರ್ಯಕ್ರಮಗಳನ್ನು ಸೀಮಿತಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸದ್ಯದ ಮಟ್ಟಿಗೆ ಶಾಲಾ-ಕಾಲೇಜು ಹಾಗೂ ಶಿಕ್ಷಣ ಇಲಾಖೆಯಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಪೋಷಕರು ಮನೆಯಲ್ಲಿಯೇ ತಮ್ಮ ಮಕ್ಕಳಿಗೆ ಸೃಜನಾತ್ಮಕ ವಾತಾವರಣವನ್ನು ಕಲ್ಪಿಸಿಕೊಡಬೇಕು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಕಾರಾತ್ಮಕವಾದಂತಹ ಉತ್ತರ ಕೊಡಲು ಪ್ರಯತ್ನಿಸಬೇಕು. ವೈಚಾರಿಕತೆಗೆ ಪೂರಕವಾದಂತಹ ವಾತಾವರಣವನ್ನು ನಿರ್ಮಿಸಿಕೊಡಬೇಕು ಎಂದು ಅವರು ಆಶಿಸಿದರು.

ಹಿರಿಯ ಸಾಹಿತಿ ಅಡ್ಡೂರು ಕೃಷ್ಣರಾವ್ ಮಾತನಾಡಿ, ಮಣ್ಣಿನ ವಾಸನೆ ನೋಡದ, ಕೃಷಿ ಬೆಳೆಗಳ ಬೀಜವನ್ನೇ ನೋಡದ ಶಿಕ್ಷಕರು ಕೃಷಿ ಕುರಿತು ಪಾಠ ಮಾಡುವಂತಾಗಿದೆ. ಇದರಿಂದ ಶಿಕ್ಷಕರು ಯಾವ ರೀತಿಯ ಪಾಠ ಮಾಡಬಹುದು, ಅದನ್ನು ಕೇಳುವ ವಿದ್ಯಾರ್ಥಿಗಳು ಏನನ್ನು ಕಲಿಯಲು ಸಾಧ್ಯ. ಇಂತಹ ವಾತಾವರಣದಿಂದಾಗಿ ದೇಶದಲ್ಲಿ ಕೃಷಿ ಕ್ಷೇತ್ರ ತೀರ ಕೆಳ ಹಂತಕ್ಕೆ ತಲುಪಿದೆ ಎಂದು ವಿಷಾದಿಸಿದರು.

ಕನ್ನಡದಲ್ಲಿ ಕೃಷಿ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ತೀರ ಕಡಿಮೆಯಿದೆ. ಇದರಿಂದ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಕೃಷಿ ಕುರಿತು ಪರಿಣಾಮಕಾರಿಯಾಗಿ ಆಸಕ್ತಿಯನ್ನು ಮೂಡಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೃಷಿಗೆ ಸಂಬಂಧಿಸಿದಂತೆ ‘ಕೃಷಿ ವಿಜ್ಞಾನ’ ಕೃತಿಯನ್ನು ಹೊರ ತರಲಾಗುತ್ತಿದೆ ಎಂದು ಅವರು ತಿಳಿಸಿದರು.

ಹಿರಿಯ ಲೇಖಕ ಡಾ.ಎ.ಓ.ಆವಲ ಮೂರ್ತಿ ಮಾತನಾಡಿ, ಪ್ರಶ್ನೆಗಳನ್ನು ಮೂಡುವುದರಿಂದ ಮಾತ್ರವೇ ವಿಜ್ಞಾನ ಕ್ಷೇತ್ರ ಬೆಳೆಯುವುದು. ಈ ನಿಟ್ಟಿನಲ್ಲಿ ಮಕ್ಕಳಲ್ಲಿರುವ ಅಪಾರವಾದ ಕುತೂಹಲವನ್ನು ಪ್ರಶ್ನೆಯಾಗಿಸಿ, ಆ ಪ್ರಶ್ನೆಗಳ ಮೂಲಕ ಹೊಸ ಆವಿಷ್ಕಾರ ಮೂಡುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ಟಿ.ಎಂ.ಕುಮಾರ್ ಮಾತನಾಡಿ, ಶಿಶು ಪುಸ್ತಕಗಳು ಚಳವಳಿ ರೂಪದಲ್ಲಿ ಪ್ರತಿ ಮನೆಗಳಿಗೂ ತಲುಪುವಂತಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಆಶಿಸಿದರು.

ಈ ಮೊದಲು ಪ್ರಾಥಮಿಕ ಶಿಕ್ಷಣದಲ್ಲಿ ಪಠ್ಯಪುಸ್ತಗಳಿಗೆ ಪೂರಕವಾಗಿ ಹಲವು ಮಕ್ಕಳ ಪುಸ್ತಕಗಳನ್ನು ಶಾಲೆಗಳಲ್ಲಿ ಕೊಡಲಾಗುತ್ತಿತ್ತು. ಇದರಿಂದ ಸೃಜನಾತ್ಮಕತೆ ಬೆಳೆಯಲು ಸಾಧ್ಯವಾಗುತ್ತಿತ್ತು. ಆದರೆ, ಈಗಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ ಎಂದು ನೆಪವೊಡ್ಡಿ ಪಠ್ಯಗಳಿಗೆ ಪೂರಕವಾದ ಪುಸ್ತಕಗಳನ್ನು ಹಿಂಪಡೆಯಲಾಗಿದೆ ಎಂದು ಅವರು ವಿಷಾದಿಸಿದರು.

ಈ ವೇಳೆ ಹಿರಿಯ ಸಾಹಿತಿಗಳಾದ ಡಾ.ಪ್ರತಿಭಾ ಕಾರಂತ್, ಎಸ್.ಮಂಜುನಾಥ್ ಹಾಗೂ ನವ ಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ಎ.ರಮೇಶ್ ಉಡುಪ, ವ್ಯವಸ್ಥಾಪಕ ನಿರ್ದೇಶಕ ಡಾ.ಸಿದ್ಧನಗೌಡ ಪಾಟೀಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News